November 19, 2026
Thursday, November 19, 2026
spot_img

ಬೆಂಗಳೂರಿನಲ್ಲಿ ಏಳು ಮರ್ಡರ್‌ ಕೇಸ್‌: ಕೊ*ಲೆ ಮಾಡಿ ಆತ್ಮಗಳ ಭಯದಿಂದ ನಡುಗಿದ್ದ ಹಂತಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ರಾಜಾಜಿನಗರದ ಏಳು ಜನರ ಬರ್ಬರ ಹತ್ಯೆಗೆ ಸಂಬಂಧಿಸಿದಂತೆ ತನಿಖೆಯಲ್ಲಿ ಭಯಾನಕ ಸತ್ಯಗಳು ಹೊರಬೀಳುತ್ತಿವೆ. ಏಳು ಜನರನ್ನು ಸ್ವಲ್ಪವೂ ಕರುಣೆ ಇಲ್ಲದಂತೆ ಕೊಲೆ ಮಾಡಿದ್ದ ಆರೋಪಿ ಇಂದುಶೇಖರ್‌ ಕೃತ್ಯದ ಬಳಿಕ ಆತ್ಮಗಳ ಭಯದಿಂದ ನಡುಗಿದ್ದ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

ಪತ್ನಿ ಹಾಗೂ ಪತ್ನಿಯ ಕುಟುಂಬದವರಾದ ಏಳು ಮಂದಿಯನ್ನು ಕೊಂದು ತಲೆಯ ಮೇಲೆ ಕಲ್ಲು ಹಾಕಿ ವಿಕಾರವಾಗಿ ಕೊಲೆ ಮಾಡಿದ್ದ ಇಂದುಶೇಖರ್‌ ಒಂದೊಂದು ಕೊಲೆಯ ನಂತರವೂ ರಾತ್ರಿ ಮನೆಗೆ ಬಂದು ಮಲಗುವ ವೇಳೆ ಹೆದರುತ್ತಿದ್ದ. ಎಲ್ಲಿ ಆತ್ಮಗಳು ಬಂದು ನನ್ನನ್ನು ಕಾಡುತ್ತವೆಯೋ ಎಂದು ನಡುಗಿದ್ದ ಎನ್ನಲಾಗಿದೆ.

ಪತ್ನಿ ಸುನೀತಾ ತೀವ್ರವಾಗಿ ಹಲ್ಲೆಗೊಳಗಾದ ನಂತರ ಯಾಕೆ ಹೊಡೆಯುತ್ತೀಯ ಎಂದು ಪ್ರಶ್ನಿಸಿದ್ದರು. ಈ ವೇಳೆ ನಿನ್ನಿಂದ ನನ್ನ ಜೀವನ, ನೆಮ್ಮದಿ ಎಲ್ಲವೂ ಹಾಳಾಗಿದೆ ಎಂದು ಹೇಳಿದ್ದ. ಆಕೆ ಮಾತನಾಡುವ ಮೊದಲೇ ರುಬ್ಬುವ ಕಲ್ಲಿನಿಂದ ಆಕೆಯ ತಲೆಗೆ ಹೊಡೆದಿದ್ದ. ಬಲವಾದ ಹೊಡೆತದಿಂದ ಆಕೆಗೆ ತೀವ್ರ ರಕ್ತಸ್ರಾವವಾಗಿತ್ತು. ಬಿಟ್ಟುಬಿಡಿ ಎಂದು ಬೇಡುತ್ತಿದ್ದ ಪತ್ನಿಯನ್ನು ಬಾತ್‌ರೂಮ್‌ ಒಳಕ್ಕೆ ಎಳೆದೊಯ್ದು ಕೊಂಚ ಕರುಣೆ ಇಲ್ಲದವನಂತೆ ಕಾಲಿನಿಂದ ಸಾಯುವವರೆಗೂ ಒದ್ದಿದ್ದ. ಇಷ್ಟೆಲ್ಲಾ ಕ್ರೌರ್ಯವನ್ನು ಕಣ್ಣಾರೆ ನೋಡುತ್ತಿದ್ದ ಮಗಳು ಒಂದು ಹನಿ ಕಣ್ಣೀರು ಹಾಕದೇ, ಕೊಲೆ ಮಾಡದಂತೆ ಬೇಡದೇ, ನಿಂತಲ್ಲೇ ನಿಂತು ನೋಡುತ್ತಿದ್ದಳು ಎನ್ನಲಾಗಿದೆ. ಮೃತದೇಃವನ್ನು ಕಟ್ಟಲು ಸೀರೆ ಹಾಗೂ ಬೆಡ್‌ಶೀಟ್‌ಗಳನ್ನು ನೀಡಿ ತಂದೆಗೆ ಸಹಾಯ ಮಾಡಿದ್ದಾಳೆ.

ಜನರನ್ನು ಭೀಕರವಾಗಿ ಕೊಂದ ಭಯದಲ್ಲಿದ್ದ ಇಂದುಶೇಖರ ರಾತ್ರಿ ಆತ್ಮಗಳ ಕಾಟಕ್ಕೆ ಹೆದರಿ ದೇವರ ಮನೆಯ ಮುಂದೆ ರಾತ್ರಿಯಿಡೀ ಕುಳಿತಿದ್ದ. ದೇವರ ನಾಮ ಸ್ಮರಣೆ ಮಾಡುತ್ತಾ ದೆವ್ವಗಳಿಂದ ಕಾಪಾಡಪ್ಪ ಎಂದು ಬೇಡಿಕೊಂಡಿದ್ದ. ಮಗಳು ತಂದೆಗೆ ಏನಾಗಲ್ಲ ಸುಮ್ನಿರಪ್ಪ ಎಂದು ಧೈರ್ಯ ನೀಡಿದ್ದಳು. ಮನೆಯಲ್ಲಿ ಇರಲು ಆಗದೇ ಇಂದುಶೇಖರ ಹಾಗೂ ಮಗಳು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬಂದಿದ್ದರು.

ಸದ್ಯ ಪೊಲೀಸರು ಆತನನ್ನು ಕಸ್ಟಡಿ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ ಇಂದುಶೇಖರ್, ತನಿಖೆಯ ದಿಕ್ಕು ತಪ್ಪಿಸಲು ಗಂಟೆಗೊಮ್ಮೆ ನನಗೆ ಬಿಪಿ ಹೆಚ್ಚಾಗ್ತಾ ಇದೆ, ವಿಶ್ರಾಂತಿ ಬೇಕಿದೆ ಎಂದು ನಾಟಕವಾಡುತ್ತಿದ್ದಾನೆ ಎಂದು ತಿಳಿದುಬಂದಿದೆ.

Must Read