ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಗತ್ತಿನಾದ್ಯಂತ ಗೇಮಿಂಗ್ ಪ್ರಿಯರು ಕಳೆದ 13 ವರ್ಷಗಳಿಂದ ಕಾತರದಿಂದ ಕಾಯುತ್ತಿದ್ದ ಬಹುನಿರೀಕ್ಷಿತ ‘ಗ್ರ್ಯಾಂಡ್ ಥೆಫ್ಟ್ ಆಟೋ 6’ (GTA 6) ವಿಡಿಯೋ ಗೇಮ್ ಗುರುವಾರ ಮಧ್ಯರಾತ್ರಿ ಬಿಡುಗಡೆಯಾಗಿದೆ. ಈ ಜಾಗತಿಕ ಗೇಮಿಂಗ್ ಸಂಭ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ವಿಭಿನ್ನವಾಗಿ ಹಂಚಿಕೊಂಡಿದ್ದು, 2013ರಲ್ಲಿ ಬಂದ ‘ಜಿಟಿಎ 5’ ಮತ್ತು ಈಗಿನ ‘ಜಿಟಿಎ 6’ ನಡುವಿನ 13 ವರ್ಷಗಳ ಅವಧಿಯನ್ನು ಭಾರತದ ಅಭಿವೃದ್ಧಿಯ ಪಯಣಕ್ಕೆ ಹೋಲಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, “ಭಾರತ ಈಗ ಸಂಪೂರ್ಣ ಹೊಸ ಆಟವನ್ನೇ ಆಡುತ್ತಿದೆ!” ಎಂದು ಬರೆದುಕೊಂಡಿದ್ದಾರೆ. 2014ರಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಆದ ಬದಲಾವಣೆಗಳನ್ನು ಹಿಂದಿನ ಯುಪಿಎ ಸರ್ಕಾರದ ಅವಧಿಗೆ ಹೋಲಿಸುವ ಮೂಲಕ ವಿಪಕ್ಷಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಗೇಮರ್‌ಗಳು ‘ವೈಸ್ ಸಿಟಿ’ ಎಂಬ ಕಾಲ್ಪನಿಕ ಲೋಕಕ್ಕೆ ಮರಳಲು ಒಂದು ದಶಕಕ್ಕೂ ಹೆಚ್ಚು ಕಾಲ ಕಾದರೆ, ಇದೇ ಅವಧಿಯಲ್ಲಿ ಭಾರತ ವಾಸ್ತವದಲ್ಲಿ ಹೊಸ ಎತ್ತರಕ್ಕೆ ಏರಿದೆ ಎಂದು ಅವರು ಬಣ್ಣಿಸಿದ್ದಾರೆ.
ತಮ್ಮ ಪೋಸ್ಟ್‌ನಲ್ಲಿ 2013 ಮತ್ತು 2026ರ ನಡುವಿನ ಪ್ರಮುಖ ಸಾಧನೆಗಳನ್ನು ಪ್ರಧಾನಿ ಮೋದಿ ಪಟ್ಟಿ ಮಾಡಿದ್ದಾರೆ:
ಆರ್ಥಿಕ ಪ್ರಗತಿ: ಅಂದು ದುರ್ಬಲ ಆರ್ಥಿಕತೆಗಳ ಪಟ್ಟಿಯಲ್ಲಿದ್ದ ಭಾರತ, ಇಂದು ವಿಶ್ವದ ಅತಿದೊಡ್ಡ ಆರ್ಥಿಕ ಶಕ್ತಿಗಳಲ್ಲಿ ಒಂದಾಗಿ ‘ಲೆವೆಲ್ ಅಪ್’ ಆಗಿದೆ.
ಡಿಜಿಟಲ್ ಕ್ರಾಂತಿ: ಯುಪಿಐ ಮೂಲಕ ಡಿಜಿಟಲ್ ಪಾವತಿ ವಿಸ್ತರಣೆ, ಅತ್ಯಂತ ಅಗ್ಗದ ದರದಲ್ಲಿ ಇಂಟರ್ನೆಟ್ ಸೇವೆ ಮತ್ತು ಬಡತನ ನಿರ್ಮೂಲನೆಯಲ್ಲಿ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ.
ಭದ್ರತೆ ಮತ್ತು ಬಾಹ್ಯಾಕಾಶ: ಬಾಹ್ಯಾಕಾಶ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆಗಳು, ಸ್ವಚ್ಛ ಭಾರತ ಅಭಿಯಾನದ ಯಶಸ್ಸು ಹಾಗೂ ದೇಶವನ್ನು ನಕ್ಸಲ್ ಮುಕ್ತಗೊಳಿಸುವಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ಒಟ್ಟಿನಲ್ಲಿ, ಜಾಗತಿಕ ಗೇಮಿಂಗ್ ಹಬ್ಬದ ನಡುವೆ ದೇಶದ ಅಭಿವೃದ್ಧಿಯ ವರದಿಯನ್ನು ಯುವಪೀಳಿಗೆಗೆ ಅರ್ಥವಾಗುವ ಭಾಷೆಯಲ್ಲಿ ತಲುಪಿಸುವಲ್ಲಿ ಪ್ರಧಾನಿ ಮೋದಿ ಯಶಸ್ವಿಯಾಗಿದ್ದಾರೆ.



