ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ‘ಬಾದ್ಷಾ’ ಶಾರುಖ್ ಖಾನ್ ಭಾರತೀಯ ಚಿತ್ರರಂಗದ ಕೀರ್ತಿಯನ್ನು ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಎತ್ತಿ ಹಿಡಿದಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ‘ವೆರೈಟಿ’ ಸಂಸ್ಥೆ ಪ್ರಕಟಿಸಿರುವ ‘ವಿಶ್ವದ ಸಾರ್ವಕಾಲಿಕ 100 ಶ್ರೇಷ್ಠ ಸಿನಿಮಾ ತಾರೆಯರ’ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ನಟ ಎಂಬ ಅಪರೂಪದ ದಾಖಲೆಯನ್ನು ಶಾರುಖ್ ಬರೆದಿದ್ದಾರೆ.
ಈ ಪ್ರತಿಷ್ಠಿತ ಪಟ್ಟಿಯಲ್ಲಿ ಶಾರುಖ್ ಖಾನ್ 92ನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ದೇವದಾಸ್’ ಚಿತ್ರವನ್ನು ಶಾರುಖ್ ಅವರ ವೃತ್ತಿಜೀವನದ ಅತ್ಯುತ್ತಮ ಸಿನಿಮಾ ಎಂದು ‘ವೆರೈಟಿ’ ಉಲ್ಲೇಖಿಸಿದೆ. ಈ ಹಿಂದೆ ‘ಟೈಮ್’ ಮತ್ತು ‘ನ್ಯೂಸ್ವೀಕ್’ ಪತ್ರಿಕೆಗಳ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲೂ ಮಿಂಚಿದ್ದ ಶಾರುಖ್ ಮುಡಿಗೆ ಈಗ ಮತ್ತೊಂದು ಜಾಗತಿಕ ಗರಿ ಸಿಕ್ಕಂತಾಗಿದೆ.
ಜಾಗತಿಕ ಪಟ್ಟಿಯಲ್ಲಿ ಹಾಲಿವುಡ್ನ ಖ್ಯಾತ ನಟಿ ಮರ್ಲಿನ್ ಮನ್ರೋ ಮೊದಲ ಸ್ಥಾನ ಪಡೆದಿದ್ದರೆ, ಹಂಫ್ರಿ ಬೊಗಾರ್ಟ್ ಎರಡನೇ ಹಾಗೂ ಚಾರ್ಲಿ ಚಾಪ್ಲಿನ್ ಮೂರನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಟಾಪ್ 10ರಲ್ಲಿ ಜ್ಯಾಕ್ ನಿಕಲ್ಸನ್, ಕ್ಯಾಥರೀನ್ ಹೆಪ್ಬರ್ನ್, ಸಿಡ್ನಿ ಪೊಯಿಟಿಯರ್, ಮರ್ಲಾನ್ ಬ್ರಾಂಡೋ, ಟಾಮ್ ಕ್ರೂಸ್, ಟೊಶಿರೊ ಮಿಫುನೆ ಮತ್ತು ಬಾರ್ಬ್ರಾ ಸ್ಟ್ರೈಸಂಡ್ ಸ್ಥಾನ ಪಡೆದಿದ್ದಾರೆ. ಜೂಲಿಯಾ ರಾಬರ್ಟ್ಸ್ (13), ಆಡ್ರೆ ಹೆಪ್ಬರ್ನ್ (26), ರಾಬರ್ಟ್ ಡೌನಿ ಜೂನಿಯರ್ (74), ರಯಾನ್ ಗೋಸ್ಲಿಂಗ್ (77), ರಾಬರ್ಟ್ ಪ್ಯಾಟಿನ್ಸನ್ (83), ಟಿಮೋಥೀ ಚಲಮೆಟ್ (86), ಎಮ್ಮಾ ಸ್ಟೋನ್ (94) ಮತ್ತು ಝೆಂಡಯಾ (98) ಅವರಂತಹ ಘಟಾನುಘಟಿ ಕಲಾವಿದರ ನಡುವೆ ಶಾರುಖ್ ಗುರುತಿಸಿಕೊಂಡಿರುವುದು ವಿಶೇಷ.
80ರ ದಶಕದ ಕೊನೆಯಲ್ಲಿ ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಶಾರುಖ್, ‘ದೀವಾನಾ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. 90ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. 2018ರಿಂದ 2022ರವರೆಗೆ ಸತತ ಸೋಲುಗಳನ್ನು ಕಂಡಿದ್ದ ಅವರು, 2023ರಲ್ಲಿ ‘ಪಠಾಣ್’, ‘ಜವಾನ್’ ಮತ್ತು ‘ಡಂಕಿ’ ಚಿತ್ರಗಳ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿ ಬಾಕ್ಸ್ ಆಫೀಸ್ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದರು.
ಸದ್ಯ ಶಾರುಖ್ ಅಭಿಮಾನಿಗಳು ಅವರ ಮುಂದಿನ ಸಿನಿಮಾ ‘ಕಿಂಗ್’ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಸಿದ್ದಾರ್ಥ್ ಆನಂದ್ ನಿರ್ದೇಶನದ ಈ ಚಿತ್ರ ಡಿಸೆಂಬರ್ 24ರಂದು ತೆರೆಗೆ ಬರಲಿದ್ದು, ಈ ಸಿನಿಮಾದ ಮೂಲಕ ಶಾರುಖ್ ಪುತ್ರಿ ಸುಹಾನಾ ಖಾನ್ ಕೂಡ ದೊಡ್ಡ ಪರದೆಗೆ ಪದಾರ್ಪಣೆ ಮಾಡುತ್ತಿದ್ದಾರೆ.



