November 19, 2026
Thursday, November 19, 2026
spot_img

ಸಾಯಿ ಪಲ್ಲವಿ ರಾಮಾಯಣದಲ್ಲಿ ನಟಿಸಿಯೇ ಇಲ್ಲ! ಮೊಮ್ಮಗಳ ನಟನೆ ಕಂಡು ಅಜ್ಜ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದಲ್ಲಿ ಸೀತಾಮಾತೆಯಾಗಿ ಅಭಿನಯಿಸಿರುವ ನಟಿ ಸಾಯಿ ಪಲ್ಲವಿ ಅವರಿಗೆ ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಆದರೆ ಇದೇ ಹೊತ್ತಿನಲ್ಲಿ, ಸಾಯಿ ಪಲ್ಲವಿ ಅವರ ಅಜ್ಜ ಮಾತನಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಆ ವಿಡಿಯೋದಲ್ಲಿ ಅವರು, “ಸಾಯಿ ಪಲ್ಲವಿ ರಾಮಾಯಣದಲ್ಲಿ ನಟಿಸಿಲ್ಲ” ಎಂದು ಹೇಳಿರುವಂತೆ ಕಾಣಿಸುತ್ತಿತ್ತು. ಇದೀಗ ಸ್ವತಃ ಸಾಯಿ ಪಲ್ಲವಿ ಅವರೇ ಈ ವಿಡಿಯೋದ ಹಿಂದಿನ ಪೂರ್ಣ ಸತ್ಯವನ್ನು ಬಹಿರಂಗಪಡಿಸಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಈ ವೈರಲ್ ವಿಡಿಯೋ ಬಗ್ಗೆ ಮಾತನಾಡಿದ ಸಾಯಿ ಪಲ್ಲವಿ, “ನನ್ನ ಅಜ್ಜನ ಮಾತನ್ನು ಅರ್ಧಕ್ಕೆ ಕತ್ತರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಇದರಿಂದ ಜನರಿಗೆ ತಪ್ಪು ಸಂದೇಶ ಹೋಗುತ್ತಿದೆ. ಅಸಲಿಗೆ ನನ್ನ ಅಜ್ಜ ಹೇಳಿದ್ದು, ‘ರಾಮಾಯಣದಲ್ಲಿ ಅವಳು ನಟಿಸಿದ್ದಾಳೆ ಎಂದು ನನಗೆ ಅನಿಸುತ್ತಿಲ್ಲ, ಬದಲಾಗಿ ಆ ದೇವರೇ ಅವಳ ಮೂಲಕ ನಟಿಸಿದ್ದಾನೆ’ ಎಂದು. ಅವರ ಆ ಮಾತಿನ ಅರ್ಥವೇ ಬೇರೆಯಿತ್ತು” ಎಂದು ಭಾವುಕರಾಗಿ ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಪಲ್ಲವಿ, “ನಮ್ಮ ಮನೆಯಲ್ಲಿ ಅಜ್ಜ-ಅಜ್ಜಿ ನನ್ನನ್ನು ಮತ್ತು ಇತರ ಮಕ್ಕಳನ್ನು ಯಾವಾಗಲೂ ದೇವರು ಮತ್ತು ದೇವತೆಯರಂತೆ ಕರೆಯುತ್ತಿದ್ದರು. ನಾವು ಏನಾದರೂ ಸಣ್ಣ ತಪ್ಪು ಮಾಡಿದರೆ, ‘ನೀನು ದೇವತೆ, ಈ ರೀತಿ ಮಾಡಬಾರದು’ ಎಂದು ಬುದ್ಧಿ ಹೇಳುತ್ತಿದ್ದರು. ಅದು ನಮಗೆ ಒಂದಷ್ಟು ಜವಾಬ್ದಾರಿಯ ಒತ್ತಡವನ್ನೂ ತರುತ್ತಿತ್ತು. ಆದರೆ ನನಗೆ ಸೀತೆಯ ಪಾತ್ರ ಸಿಕ್ಕಾಗ ನಾನು ಮೊದಲು ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದೇ ನನ್ನ ಅಜ್ಜ-ಅಜ್ಜಿಯ ಬಳಿ. ಅವರು ತುಂಬಾ ಖುಷಿಪಟ್ಟಿದ್ದರು” ಎಂದು ಹೇಳಿಕೊಂಡಿದ್ದಾರೆ.

ದೇವತೆಯ ಪಾತ್ರ ನಿರ್ವಹಿಸುವುದು ಸುಲಭದ ಮಾತಲ್ಲ ಎಂದಿರುವ ಸಾಯಿ ಪಲ್ಲವಿ, “ನಾನು ಸೀತೆಯ ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದಲ್ಲ, ಆ ಪಾತ್ರವೇ ನನ್ನನ್ನು ಆಶೀರ್ವದಿಸಿದೆ. ಚಿತ್ರೀಕರಣಕ್ಕೂ ಮುನ್ನ ನಾನು ಧ್ಯಾನಕ್ಕೆ ಕುಳಿತು, ‘ತಾಯಿ ಸೀತಾಮಾತೆ, ನೀನೇ ನನ್ನ ಮೂಲಕ ನಟಿಸು, ಈ ಸಿನಿಮಾಗೆ ಏನು ಬೇಕೋ ಅದನ್ನು ನೀನೇ ಮಾಡಿಸು’ ಎಂದು ಪ್ರಾರ್ಥಿಸುತ್ತಿದ್ದೆ” ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಸಾಯಿ ಪಲ್ಲವಿ ಅವರ ಈ ಸರಳತೆ ಮತ್ತು ಭಕ್ತಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

Must Read

Skip to toolbar