November 20, 2026
Friday, November 20, 2026
spot_img

ರೆಸಾರ್ಟ್‌ನಲ್ಲಿ ಬಾರ್ಬೆಕ್ಯೂ ಡಿನ್ನರ್‌ ಮಾಡುವಾಗ ಬೆಂಕಿ : ಎರಡು ತಿಂಗಳ ನಂತರ ನವವಿವಾಹಿತೆ ಸಾ*ವು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಡಾರ್ಜಲಿಂಗ್‌ ಜಿಲ್ಲೆಯ ಸಿಟ್ಟಾಂಗ್‌ ರೆಸಾರ್ಟ್‌ ಒಂದರಲ್ಲಿ ಬಾರ್ಬೆಕ್ಯೂ ಡಿನ್ನರ್‌ ಮಾಡುವ ವೇಳೆ ನವವಿವಾಹಿತೆಗೆ ಬೆಂಕಿ ತಗುಲಿತ್ತು. ಎರಡು ತಿಂಗಳು ಆಸ್ಪತ್ರೆಯಲ್ಲಿ ದೀರ್ಘ ಹೋರಾಟ ನಡೆಸಿದ ನಂತರ ಇಂದು ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯ ನಿವಾಸಿ ನಿಕಿತಾ ಸಹ ಮೃತರು. ಸೆ. ೧೩ರಂದು ತಮ್ಮ ಪತಿ ಸಮೀರ್‌ ಜೊತೆ ಹನಿಮೂನ್‌ಗೆಂದು ನಿಕಿತಾ ಸಿಟ್ಟಾಂಗ್‌ಗೆ ತೆರಳಿದ್ದರು. ರೆಸಾರ್ಟ್‌ನಲ್ಲಿ ಬಾರ್ಬೆಕ್ಯೂ ಅಡುಗೆ ತಯಾರಿಸುವ ಸ್ಟೇಷನ್‌ ಪಕ್ಕದಲ್ಲಿಯೇ ಜೋಡಿ ಕುಳಿತಿತ್ತು.

ಈ ವೇಳೆ ಬಾರ್ಬೆಕ್ಯೂ ಮಾಡುತ್ತಿದ್ದ ಬಾಣಲೆಗೆ ವ್ಯಕ್ತಿಯೊಬ್ಬ ಕ್ಯಾನ್‌ನಿಂದ ಒಂದು ರೀತಿಯ ದ್ರವವನ್ನು ಸುರಿದಿದ್ದ. ಈ ವೇಳೆ ಏಕಾಏಕಿ ಬೆಂಕಿಯ ಜ್ವಾಲೆ ಎದ್ದು ಎದುರು ಕುಳಿತ ನಿಕಿತಾ ಬಟ್ಟೆಗೆ ಹೊತ್ತಿಕೊಂಡಿತ್ತು. 60 % ರಷ್ಟು ಸುಟ್ಟ ಗಾಯಗಳಾಗಿದ್ದ ಮಹಿಳೆಯನ್ನು ಆರಂಭದಲ್ಲಿ ಸಿಲಿಗುರಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲ್ಕತ್ತಾಗೆ ಸ್ಥಳಾಂತರಿಸಲಾಗಿತ್ತು. ನಾಲ್ಕು ದಿನಗಳ ಹಿಂದೆ ಅವರ ಆರೋಗ್ಯ ಪರಿಸ್ಥಿತಿ ತೀವ್ರ ಹದಗೆಟ್ಟಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ನಿಖಿತಾ ಮೃತಪಟ್ಟಿದ್ದಾರೆ.

ರೆಸಾರ್ಟ್‌ನ ನಿರ್ಲಕ್ಷ್ಯದಿಂದ ನನ್ನ ಪತ್ನಿ ಮೃತಪಟ್ಟಿದ್ದಾಳೆ. ಹನಿಮೂನ್‌ನಲ್ಲಿ ರಿಲ್ಯಾಕ್ಸ್‌ ಮಾಡೋದಕ್ಕೆ ಬಂದಿದ್ದೆವು. ಪತ್ನಿಗೆ ಈ ರೀತಿ ಆಗುವಂತೆ ಮಾಡಿದ್ದಾರೆ. ಎಣ್ಣೆ ಡ್ರಮ್‌ನಲ್ಲಿ ಏನಿತ್ತೋ ಗೊತ್ತಿಲ್ಲ. ರೆಸಾರ್ಟ್‌ ನಿರ್ಲಕ್ಷ್ಯದಿಂದ ನಾನು ಪತ್ನಿಯನ್ನು ಕಳೆದುಕೊಂಡಿದ್ದೇನೆ ಎಂದು ಪತಿ ಸಮೀರ್‌ ಹೇಳಿದ್ದಾರೆ.

ಸಿಸಿಟಿವಿ ದೃಶ್ಯಗಳಲ್ಲಿ ಬೆಂಕಿಗೆ ವಸ್ತು ಸುರಿಯುತ್ತಿರುವುದು ನಮ್ಮ ಉದ್ಯೋಗಿಯಲ್ಲ ಎಂದು ಮಾಲೀಕ ನೆಹಾಲ್ ಹೇಳಿದ್ದರು. ದಂಪತಿಗಳು ಜ್ವಾಲೆಯ ಹತ್ತಿರ ಕುಳಿತುಕೊಳ್ಳದಂತೆ ಪದೇ ಪದೇ ಎಚ್ಚರಿಕೆ ನೀಡಲಾಗಿತ್ತು ಎಂದು ಅವರು ವಾದಿಸಿದ್ದರು. ಇನ್ನೂ ದಂಪತಿ ಚಳಿ ಎಂದು ಹೇಳಿದ್ದಕ್ಕೆ ಅಪರಿಚಿತ ವ್ಯಕ್ತಿ ಸೀಮೆ ಎಣ್ಣೆಯನ್ನು ಬೆಂಕಿಗೆ ಸುರಿದಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆಯ ನಂತರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

Must Read