ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಮತ್ತು ಖ್ಯಾತ ಚಲನಚಿತ್ರ ನಿರ್ಮಾಪಕ ರಾಜ್ ನಿಡಿಮೋರು ಅವರ ಬಾಳಲ್ಲಿ ಹೊಸ ಸಂತಸದ ಅಲೆ ಎದ್ದಿದೆ. ಈ ತಾರಾ ದಂಪತಿ ಪೋಷಕರಾಗಿದ್ದು, ನವೆಂಬರ್ 19ರ ಗುರುವಾರದಂದು ಸಮಂತಾ ಅವರು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಿಹಿ ಸುದ್ದಿಯನ್ನು ಸ್ವತಃ ಸಮಂತಾ ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮತ್ತು ಸಂತಸ ನೀಡಿದ್ದಾರೆ.
ಶುಕ್ರವಾರ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಶೇಷ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಸಮಂತಾ, ಮಗುವಿನ ಹೆಸರನ್ನು ಕೂಡ ಬಹಿರಂಗಪಡಿಸಿದ್ದಾರೆ. ತಿಳಿ ಕೆನೆ ಬಣ್ಣದ ಬಟ್ಟೆಯಲ್ಲಿ ಸುತ್ತಿರುವ ಪುಟ್ಟ ಮಗು, ತಾಯಿಯ ಕಿರುಬೆರಳನ್ನು ಮೃದುವಾಗಿ ಹಿಡಿದಿರುವ ಮನಮೋಹಕ ಚಿತ್ರವನ್ನು ಅವರು ಹಂಚಿಕೊಂಡಿದ್ದಾರೆ. ಈ ಚಿತ್ರದೊಂದಿಗೆ, “ನಮ್ಮ ಮುದ್ದಾದ ಗಂಡು ಮಗು ದೇವ್ ನಿಡಿಮೋರು. 19.11.2026. ನಮ್ಮ ಹೃದಯಗಳು ಎಂದಿಗಿಂತಲೂ ಹೆಚ್ಚು ಸಂತೋಷದಿಂದ ತುಂಬಿವೆ. ಸಮಂತಾ ಮತ್ತು ರಾಜ್” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಸಮಂತಾ ಈ ಸುದ್ದಿ ಹಂಚಿಕೊಂಡ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಚಿತ್ರರಂಗದ ಅನೇಕ ಗಣ್ಯರು ಮತ್ತು ಸಹನಟರು ನವ ದಂಪತಿಗೆ ಶುಭ ಹಾರೈಸಿದ್ದಾರೆ. ನಟಿ ವರಲಕ್ಷ್ಮಿ ಶರತ್ಕುಮಾರ್ ದಂಪತಿಗೆ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ಇನ್ನು ಸಮಂತಾ ಅವರ ‘ಮಾ ಇಂಟಿ ಬಂಗಾರಂ’ ಚಿತ್ರದ ಸಹನಟಿ ಶ್ರೀಮುಖಿ ಅವರು ಸಂತಸ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಗಾಯಕಿ ಹಾಗೂ ನಟಿ ಸೋಫಿ ಚೌಧರಿ ಕೂಡ ಮೂವರಿಗೂ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.
ಜೀವನದ ಹೊಸ ಅಧ್ಯಾಯವನ್ನು ಆರಂಭಿಸಿರುವ ಸಮಂತಾ ಮತ್ತು ರಾಜ್ ನಿಡಿಮೋರು ದಂಪತಿಗೆ ಸಾವಿರಾರು ಅಭಿಮಾನಿಗಳು ಕಮೆಂಟ್ಗಳ ಮೂಲಕ ಶುಭ ಕೋರುತ್ತಿದ್ದು, ಪುಟ್ಟ ‘ದೇವ್’ ಆಗಮನವನ್ನು ಸಂಭ್ರಮಿಸುತ್ತಿದ್ದಾರೆ.



