November 20, 2026
Friday, November 20, 2026
spot_img

ದೆಹಲಿಯಲ್ಲಿ ಮೊದಲ SCO ನಾಗರಿಕತಾ ಸಂವಾದ ವೇದಿಕೆ ಉದ್ಘಾಟಿಸಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಶಾಂಘೈ ಸಹಕಾರ ಸಂಘಟನೆಯ (SCO) ಸದಸ್ಯ ರಾಷ್ಟ್ರಗಳ ನಡುವಿನ ಸಾಂಸ್ಕೃತಿಕ ಬಾಂಧವ್ಯ ಮತ್ತು ಜನರ ನಡುವಿನ ಸಂಪರ್ಕವನ್ನು ಗಟ್ಟಿಗೊಳಿಸುವ ಮಹತ್ವದ ಹೆಜ್ಜೆಯಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ದೆಹಲಿಯ ಐತಿಹಾಸಿಕ ಪುರಾಣ ಕಿಲ್ಲಾದಲ್ಲಿ ಮೊದಲ ‘SCO ನಾಗರಿಕತಾ ಸಂವಾದ ವೇದಿಕೆ’ಯನ್ನು ಉದ್ಘಾಟಿಸಿದರು.

ನವೆಂಬರ್ 20 ರಿಂದ 22 ರವರೆಗೆ ಮೂರು ದಿನಗಳ ಕಾಲ ಈ ಸಮಾವೇಶ ನಡೆಯುತ್ತಿದ್ದು, ಭಾರತದ ಸಂಸ್ಕೃತಿ ಸಚಿವಾಲಯ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿವೆ.

ಪಾಕಿಸ್ತಾನ ಸಚಿವರ ಭಾಗಿ

ಈ ಬಹುಪಕ್ಷೀಯ ಸಮಾವೇಶದಲ್ಲಿ ಎಸ್‌ಸಿಒ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದು, ವಿಶೇಷವಾಗಿ ಪಾಕಿಸ್ತಾನದ ಹವಾಮಾನ ಬದಲಾವಣೆ ಸಚಿವ ಮುಸಾದಿಕ್ ಮಲಿಕ್ ಕೂಡ ಭಾಗವಹಿಸಿರುವುದು ಗಮನ ಸೆಳೆದಿದೆ. ಚೀನಾ, ಇರಾನ್, ಕಜಕಿಸ್ತಾನ, ತಜಿಕಿಸ್ತಾನ ಮತ್ತು ಉಜ್ಬೇಕಿಸ್ತಾನ ಸೇರಿದಂತೆ ಹಲವು ದೇಶಗಳ ಪ್ರತಿನಿಧಿಗಳು ಈ ವೇದಿಕೆಯಲ್ಲಿ ಒಂದಾಗಿದ್ದಾರೆ. ಕಾರ್ಯಕ್ರಮಕ್ಕೂ ಮುನ್ನ ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ವಿದೇಶಿ ಅತಿಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ಅಪರೂಪದ ಪ್ರದರ್ಶನ ವೀಕ್ಷಿಸಿದ ಪ್ರಧಾನಿ ಮೋದಿ

ಉದ್ಘಾಟನಾ ಸಮಾರಂಭಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಅಲ್ಲಿ ಆಯೋಜಿಸಲಾಗಿದ್ದ ಎರಡು ವಿಶೇಷ ಪ್ರದರ್ಶನಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಮೊದಲಿಗೆ ‘ಅನಂತ್’ ಮಂಟಪಕ್ಕೆ ಭೇಟಿ ನೀಡಿದ ಅವರು, 18ನೇ ಶತಮಾನದ ಅಪರೂಪದ ಮಹಾಭಾರತದ ಸುರುಳಿ ಚಿತ್ರಗಳನ್ನು ವೀಕ್ಷಿಸುವ ಮೂಲಕ ಭಾರತದ ಮಹಾಕಾವ್ಯ ಮತ್ತು ಕಲಾ ಪರಂಪರೆಯನ್ನು ಕಣ್ತುಂಬಿಕೊಂಡರು. ಇದರ ಬೆನ್ನಲ್ಲೇ ‘ಅಸ್ತಿತ್ವ’ ಎಂಬ ಪ್ರದರ್ಶನಕ್ಕೂ ಭೇಟಿ ನೀಡಿದ ಪ್ರಧಾನಿಗಳು, ಕ್ರಿ.ಪೂ. 1,200 ರಿಂದ ಕ್ರಿ.ಶ. 1200 ರವರೆಗಿನ ದೆಹಲಿಯ ಶ್ರೀಮಂತ ಇತಿಹಾಸವನ್ನು ಸಾರುವ ಪುರಾತತ್ವ ಅವಶೇಷಗಳು, ಕಲಾಕೃತಿಗಳು ಮತ್ತು ವಾಸ್ತುಶಿಲ್ಪದ ತುಣುಕುಗಳನ್ನು ಕುತೂಹಲದಿಂದ ವೀಕ್ಷಿಸಿದರು.

ಸಮ್ಮೇಳನದ ಹಿನ್ನೆಲೆ

2025ರಲ್ಲಿ ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯಲ್ಲಿ, ನಾಗರಿಕತಾ ಸಂವಾದಕ್ಕಾಗಿ ಪ್ರತ್ಯೇಕ ವೇದಿಕೆ ಸ್ಥಾಪಿಸುವ ಕುರಿತು ಪ್ರಧಾನಿ ಮೋದಿ ಅವರು ಪ್ರಸ್ತಾಪಿಸಿದ್ದರು. ಅದಕ್ಕೆ ಎಸ್‌ಸಿಒ ಸದಸ್ಯ ರಾಷ್ಟ್ರಗಳಿಂದ ಮೆಚ್ಚುಗೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಭಾರತದಲ್ಲೇ ಮೊದಲ ಸಮ್ಮೇಳನ ನಡೆಯುತ್ತಿದೆ. ಈ ಮೂರು ದಿನಗಳ ವೇದಿಕೆಯು ವಿವಿಧ ದೇಶಗಳ ವಿದ್ವಾಂಸರು, ತಜ್ಞರು ಮತ್ತು ಸಾಂಸ್ಕೃತಿಕ ಪ್ರತಿನಿಧಿಗಳನ್ನು ಒಂದೇ ಸೂರಿನಡಿ ತಂದು ಪರಸ್ಪರ ಸಹಕಾರಕ್ಕೆ ದಾರಿ ಮಾಡಿಕೊಡಲಿದೆ.

Must Read

Skip to toolbar