November 20, 2026
Friday, November 20, 2026
spot_img

ಅಂಧರ ಏಷ್ಯಾ ಕಪ್ ಫೈನಲ್ ರದ್ದಾದರೂ ಪಾಕ್‌ಗೆ ಟ್ರೋಫಿ: ಭಾರತದ ಆಕ್ರೋಶ, ಪಂದ್ಯ ಬಹಿಷ್ಕಾರಕ್ಕೆ ನಿರ್ಧಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕ್ರಿಕೆಟ್ ನಿಯಮಗಳನ್ನು ಗಾಳಿಗೆ ತೂರಿ ಪಾಕಿಸ್ತಾನವನ್ನು ಚಾಂಪಿಯನ್ ಎಂದು ಘೋಷಿಸಿರುವುದು ಅಂಧರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದೆ. ಢಾಕಾದಲ್ಲಿ ಶುಕ್ರವಾರ ನಡೆಯಬೇಕಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಫೈನಲ್ ಪಂದ್ಯ ವರುಣನ ಆರ್ಭಟಕ್ಕೆ ಬಲಿಯಾಯಿತು. ಆದರೆ, ಉಭಯ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸುವ ಬದಲು, ನೆಟ್ ರನ್ ರೇಟ್ (NRR) ಆಧಾರದಲ್ಲಿ ಪಾಕಿಸ್ತಾನಕ್ಕೆ ಪ್ರಶಸ್ತಿ ನೀಡಿರುವುದನ್ನು ಖಂಡಿಸಿ ಭಾರತೀಯ ಆಟಗಾರರು ಪ್ರಶಸ್ತಿ ವಿತರಣಾ ಸಮಾರಂಭವನ್ನು ಬಹಿಷ್ಕರಿಸಿದ್ದಾರೆ.

ಪಾಕ್ ವಿರುದ್ಧ ಆಡದಿರಲು ನಿರ್ಧಾರ

ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶೈಲೇಂದ್ರ ಅವರು, ಈ ವಿವಾದ ಬಗೆಹರಿಯುವವರೆಗೆ ಭಾರತ ತಂಡವು ಮುಂದೆಂದೂ ಪಾಕಿಸ್ತಾನದ ವಿರುದ್ಧ ಕಣಕ್ಕಿಳಿಯುವುದಿಲ್ಲ ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ. “ಮೈದಾನದಲ್ಲಿ ಆಡಿ ಗೆಲ್ಲುವ ಸಾಮರ್ಥ್ಯವಿಲ್ಲದ ಪಾಕಿಸ್ತಾನ, ಬಾಂಗ್ಲಾದೇಶದ ಸದ್ಯದ ಪರಿಸ್ಥಿತಿಯ ಲಾಭ ಪಡೆದು ತನ್ನ ಪ್ರಭಾವ ಬೀರಿದೆ. ಮ್ಯಾಚ್ ರೆಫರಿ ಮೇಲೆ ಒತ್ತಡ ಹೇರಿ ಒಂದೇ ಒಂದು ಎಸೆತವನ್ನೂ ಎಸೆಯದೆ ತಾನೇ ವಿಜೇತ ಎಂದು ಘೋಷಿಸಿಕೊಂಡಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ” ಎಂದು ಅವರು ಕಿಡಿಕಾರಿದ್ದಾರೆ.

ತಾಂತ್ರಿಕ ಸಮಿತಿಯ ನಿರ್ಧಾರಕ್ಕೆ ಅಧ್ಯಕ್ಷರ ಅಡ್ಡಗಾಲು?

ವಿಶ್ವ ಅಂಧರ ಕ್ರಿಕೆಟ್ ಮಂಡಳಿಯ (WBCC) ತಾಂತ್ರಿಕ ಸಮಿತಿಯು ಮಳೆಯಿಂದ ಪಂದ್ಯ ರದ್ದಾದ ಕಾರಣ ಭಾರತ ಮತ್ತು ಪಾಕಿಸ್ತಾನ ತಂಡಗಳನ್ನು ‘ಜಂಟಿ ವಿಜೇತರು’ ಎಂದು ಘೋಷಿಸಲು ತೀರ್ಮಾನಿಸಿತ್ತು. ಆದರೆ, WBCC ಅಧ್ಯಕ್ಷರೂ ಆಗಿರುವ ಪಾಕಿಸ್ತಾನ ಅಂಧರ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಸುಲ್ತಾನ್ ಶಾ ಅವರು ಈ ನಿರ್ಧಾರವನ್ನು ರದ್ದುಗೊಳಿಸಿ, ರನ್ ರೇಟ್ ಆಧಾರದಲ್ಲಿ ಪಾಕಿಸ್ತಾನವನ್ನು ವಿಜೇತರೆಂದು ಘೋಷಿಸುವಂತೆ ಮ್ಯಾಚ್ ರೆಫರಿಗೆ ಸೂಚಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಆಟಗಾರರು, ಅಧಿಕಾರಿಗಳ ಅಸಮಾಧಾನ

“ವಿಶ್ವದ ಯಾವುದೇ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಮೀಸಲು ದಿನ ಇರುತ್ತದೆ. ಒಂದು ವೇಳೆ ಮೀಸಲು ದಿನವಿಲ್ಲದೆ ಪಂದ್ಯ ರದ್ದಾದರೆ ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ. ನೆಟ್ ರನ್ ರೇಟ್ ಎಂಬುದು ಲೀಗ್ ಹಂತಕ್ಕೆ ಸೀಮಿತವೇ ಹೊರತು ಫೈನಲ್ ವಿಜೇತರನ್ನು ನಿರ್ಧರಿಸುವ ಮಾನದಂಡವಲ್ಲ. ನಿಯಮಾವಳಿಗಳ ಬದಲಾವಣೆ ಬಗ್ಗೆ ನಾಯಕರ ಸಭೆಯಲ್ಲೂ ಮಾಹಿತಿ ನೀಡಿರಲಿಲ್ಲ” ಎಂದು ಪಂದ್ಯದ ಅಧಿಕಾರಿಯೊಬ್ಬರು ಅಸಮಾಧಾನ ಹೊರಹಾಕಿದ್ದಾರೆ.

ಕ್ರೀಡೆ ಎಂಬುದು ನಿಯಮಗಳ ಮೇಲೆ ನಡೆಯಬೇಕೇ ಹೊರತು, ವೈಯಕ್ತಿಕ ಹಿತಾಸಕ್ತಿ ಅಥವಾ ಏಕಪಕ್ಷೀಯ ನಿರ್ಧಾರಗಳಿಂದಲ್ಲ ಎಂದು CABI ಹೇಳಿದೆ. ಭಾರತೀಯ ಆಟಗಾರರು ಕೂಡ ಈ ಅನಿರೀಕ್ಷಿತ ಹಾಗೂ ನಿಯಮಬಾಹಿರ ನಿರ್ಧಾರದ ವಿರುದ್ಧ ಧ್ವನಿ ಎತ್ತಿದ್ದು, ಮುಂದಿನ ನಿರ್ಧಾರವನ್ನು ಸಂಸ್ಥೆಗೆ ಬಿಟ್ಟಿದ್ದಾರೆ. ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಮಣಿಸಿ ಫೈನಲ್‌ಗೇರಿದ್ದ ಹಾಲಿ ಚಾಂಪಿಯನ್ ಭಾರತಕ್ಕೆ, ಆಡದೆಯೇ ರನ್ನರ್ ಅಪ್ ಸ್ಥಾನ ನೀಡಿರುವುದು ಕ್ರೀಡಾ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Must Read