ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದ ಇಂಫಾಲ ಪಶ್ಚಿಮ ಜಿಲ್ಲೆಯಲ್ಲಿ ಶುಕ್ರವಾರ ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆ ಮತ್ತು ಗುಂಡಿನ ಚಕಮಕಿಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಓರ್ವ ಮಹಿಳೆ ಸೇರಿದಂತೆ 8 ಶಂಕಿತ ಉಗ್ರರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಟ್ಸೋಯ್ ಪೊಲೀಸ್ ಠಾಣೆ ವ್ಯಾಪ್ತಿಯ ಯುಮ್ಲೆಂಬಮ್ ಅವಾಂಗ್ ಲೈಕೈ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಗುಪ್ತಚರ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಇಂಫಾಲ ಪಶ್ಚಿಮ ಜಿಲ್ಲಾ ಕಮಾಂಡೋ ಪಡೆ, ಸಿಆರ್‌ಪಿಎಫ್‌ನ ಕೋಬ್ರಾ ಘಟಕ ಹಾಗೂ ಕೇಂದ್ರ ಭದ್ರತಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿದ್ದವು. ಈ ವೇಳೆ ಶಂಕಿತ ಉಗ್ರರು ಭದ್ರತಾ ಸಿಬ್ಬಂದಿಯತ್ತ ಗುಂಡು ಹಾರಿಸಿದ್ದು, ಪಡೆಗಳು ನಡೆಸಿದ ಪ್ರತಿದಾಳಿಯಲ್ಲಿ ಓರ್ವ ಸಾವನ್ನಪ್ಪಿದ್ದಾನೆ.
ಮೃತ ವ್ಯಕ್ತಿ ಮಾಜಿ ಯೋಧ
ಎನ್‌ಕೌಂಟರ್‌ನಲ್ಲಿ ಮೃತಪಟ್ಟ ವ್ಯಕ್ತಿಯನ್ನು ಕಕ್ಚಿಂಗ್ ಜಿಲ್ಲೆಯ ವಾಬಗೈ ಯಾಂಗ್ಬಿ ಮನಿಂಗ್ ನಿವಾಸಿ ಖೈದೆಮ್ ಶ್ಯಾಮ್‌ಕುಮಾರ್ ಸಿಂಗ್ (52) ಎಂದು ಗುರುತಿಸಲಾಗಿದೆ. ಈತ ಅಸ್ಸಾಂ ರೈಫಲ್ಸ್‌ನ ಮಾಜಿ ಯೋಧನಾಗಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾನೂನು ಪ್ರಕ್ರಿಯೆಗಳಿಗಾಗಿ ಮೃತದೇಹವನ್ನು ರೀಜನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಶವಾಗಾರಕ್ಕೆ ರವಾನಿಸಲಾಗಿದೆ.
ಉಗ್ರ ಸಂಘಟನೆಯ ಸ್ವಯಂಘೋಷಿತ ಅಧ್ಯಕ್ಷ ಸೇರಿ 8 ಮಂದಿ ವಶಕ್ಕೆ
ಗುಂಡಿನ ಚಕಮಕಿಯ ಬಳಿಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುತ್ತುವರಿದು ಶೋಧ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳು, 8 ಶಂಕಿತ ಉಗ್ರರನ್ನು ಬಂಧಿಸಿ ಅವರಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ.
ಇದನ್ನೂ ಓದಿ:
ಬಂಧಿತರಲ್ಲಿ ಕೆಸಿಪಿ ಉಗ್ರ ಸಂಘಟನೆಯ ಸ್ವಯಂಘೋಷಿತ ಅಧ್ಯಕ್ಷ ಎನ್ನಲಾದ ಲೈಶ್ರಾಮ್ ರಂಜಿತ್ ಅಲಿಯಾಸ್ ತಮ್ಂಗನ್ಬಾ ಅಲಿಯಾಸ್ ಲೋಯಾ (52) ಹಾಗೂ ಮಹಿಳಾ ಕಾರ್ಯಕರ್ತೆ ಥೋಕ್ಚೋಮ್ ದೇಬರಾಣಿ ದೇವಿ (44) ಸೇರಿದ್ದಾರೆ. ಉಳಿದವರನ್ನು ಥಾಂಗ್ಜಮ್ ಶಶಿಕಾಂತ್ ಮೀಟೈ (19), ವಾಹೆಂಗ್ಬಮ್ ಮೊಮೊಚಾ (38), ಸೊರೊಖೈಬಮ್ ಅಮರ್ಜಿತ್ ಸಿಂಗ್ (26), ನವೋರೆಮ್ ಒಲೆನ್ ಸಿಂಗ್ (20), ನಿಂಗ್ಥೌಜಮ್ ಅರುಂಜಿತ್ ಮೀಟೈ (33) ಮತ್ತು ಥಾಂಗ್ಜಮ್ ನಿಶಿಕಾಂತ್ ಸಿಂಗ್ (24) ಎಂದು ಗುರುತಿಸಲಾಗಿದೆ.
ಬಂಧಿತರು ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದು, ಇತರ ವಿಧ್ವಂಸಕ ಕೃತ್ಯಗಳಲ್ಲಿ ಇವರ ಪಾತ್ರವಿದೆಯೇ ಎಂಬ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.



