ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕಾಲಿಕ ಮಳೆ ಹಾಗೂ ಬೆಳೆ ನಷ್ಟದ ಪರಿಣಾಮವಾಗಿ ಕರ್ನಾಟಕದಲ್ಲಿ ಸಾಂಬಾರ್ ಈರುಳ್ಳಿ (ಸಣ್ಣ ಈರುಳ್ಳಿ) ಬೆಲೆ ಗಗನಕ್ಕೇರಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ₹200ರ ಗಡಿ ದಾಟಿದ್ದು, ಕಳೆದ 18 ವರ್ಷಗಳಲ್ಲೇ ಗರಿಷ್ಠ ಬೆಲೆ ದಾಖಲಿಸಿದೆ. ಇದರಿಂದ ಗ್ರಾಹಕರಿಗೆ ಮಾತ್ರವಲ್ಲದೆ ಹೋಟೆಲ್ ಉದ್ಯಮಿಗಳಿಗೂ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಸಾಂಬಾರ್ ಈರುಳ್ಳಿಗೆ ಹೋಲಿಸಿದರೆ ಸಾಮಾನ್ಯ ಈರುಳ್ಳಿಯ ಬೆಲೆ ತುಸು ಕಡಿಮೆಯಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಸಾಮಾನ್ಯ ಈರುಳ್ಳಿ ಪ್ರತಿ ಕೆ.ಜಿ.ಗೆ ₹65ರಿಂದ ₹70ರಂತೆ ಮಾರಾಟವಾಗುತ್ತಿದೆ. ಸಗಟು ಮಾರುಕಟ್ಟೆಯಲ್ಲಿ ಇದರ ಬೆಲೆ ₹40ರಿಂದ ₹60ರಷ್ಟಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಈರುಳ್ಳಿ ವ್ಯಾಪಾರಿ ರವಿ ಬಾಲಕೃಷ್ಣ ಅವರ ಪ್ರಕಾರ, ಉತ್ಪಾದನಾ ಪ್ರದೇಶಗಳಿಂದ ಪೂರೈಕೆ ಕಡಿಮೆಯಾಗಿರುವುದೇ ಸಾಂಬಾರ್ ಈರುಳ್ಳಿ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ನೆರೆಯ ತಮಿಳುನಾಡಿನಲ್ಲಿ ಸುರಿದ ಭಾರಿ ಮಳೆಯಿಂದ ಬೆಳೆ ಹಾನಿಯಾಗಿದ್ದು, ಮಾರುಕಟ್ಟೆಯಲ್ಲಿ ಈರುಳ್ಳಿ ಕೊರತೆ ಉಂಟಾಗಿದೆ. ಹೀಗಾಗಿ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ ಎಂದು ತಿಳಿಸಿದ್ದಾರೆ. ಬೆಂಗಳೂರಿನ ಮಾರುಕಟ್ಟೆಗೆ ಪ್ರತಿದಿನ ಸುಮಾರು 1,000 ಟನ್ ಸಾಮಾನ್ಯ ಈರುಳ್ಳಿ ಪೂರೈಕೆಯಾಗುತ್ತದೆ. ಆದರೆ ಸಾಂಬಾರ್ ಈರುಳ್ಳಿಯ ಪೂರೈಕೆ ಕೆಲವೇ ಟನ್‌ಗಳಿಗೆ ಸೀಮಿತವಾಗಿದೆ. ನಗರದ ಸಣ್ಣ ಈರುಳ್ಳಿ ವಹಿವಾಟಿನ ಬಹುಪಾಲು ಸಿಟಿ ಮಾರ್ಕೆಟ್‌ನಲ್ಲಿ ನಡೆಯುತ್ತದೆ.
ತಮಿಳುನಾಡಿನ ನಾಮಕ್ಕಲ್ ಮತ್ತು ಪೆರಂಬಲೂರು ಜಿಲ್ಲೆಗಳ ರೈತರಿಂದ ಹೊಸೂರು ಮಾರ್ಗವಾಗಿ ಬೆಂಗಳೂರಿಗೆ ಸಾಂಬಾರ್ ಈರುಳ್ಳಿ ಪೂರೈಕೆಯಾಗುತ್ತದೆ. ಆದರೆ ಅಕಾಲಿಕ ಮಳೆ ಮತ್ತು ಬೆಳೆ ಹಾನಿಯಿಂದ ಪೂರೈಕೆ ಕುಸಿದಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಮುಂದಿನ ನಾಲ್ಕು ವಾರಗಳವರೆಗೆ ಬೆಲೆ ಹೆಚ್ಚಾಗಿಯೇ ಮುಂದುವರಿಯುವ ಸಾಧ್ಯತೆಯಿದೆ ಎಂದು ವ್ಯಾಪಾರಿಗಳು ಅಂದಾಜಿಸಿದ್ದಾರೆ. ಡಿಸೆಂಬರ್ ಅಂತ್ಯ ಅಥವಾ ಜನವರಿ ಆರಂಭದಲ್ಲಿ ಹೊಸ ಬೆಳೆ ಮಾರುಕಟ್ಟೆಗೆ ಬಂದ ಬಳಿಕ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದೆ.
ಜನವರಿ ನಂತರ ಬೆಳೆ ಇಳುವರಿ ಸಹಜವಾಗಿದ್ದರೆ ಸಾಂಬಾರ್ ಈರುಳ್ಳಿ ಬೆಲೆ ಪ್ರತಿ ಕೆ.ಜಿ.ಗೆ ₹100ರಿಂದ ₹130ಕ್ಕೆ ಇಳಿಯಬಹುದು ಎಂದು ವ್ಯಾಪಾರಿಗಳು ನಿರೀಕ್ಷಿಸಿದ್ದಾರೆ. ಅಲ್ಲಿಯವರೆಗೆ ಗ್ರಾಹಕರು ದುಬಾರಿ ಬೆಲೆ ತೆತ್ತು ಸಣ್ಣ ಈರುಳ್ಳಿ ಖರೀದಿಸುವ ಅನಿವಾರ್ಯತೆ ಎದುರಾಗಿದೆ.



