November 21, 2026
Saturday, November 21, 2026
spot_img

ಹೂಡಿಕೆಗೆ ತಕ್ಕ ಗಳಿಕೆ ಇಲ್ಲದಿದ್ದರೆ ಅದು ಫ್ಲಾಪ್: ‘ರಾಮಾಯಣ’ಕ್ಕೆ ಟಾಂಗ್ ಕೊಟ್ಟ ‘ಹನುಮಾನ್ ಅಂಶ್’ ನಿರ್ದೇಶಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಹಾಗೂ ದುಬಾರಿ ಸಿನಿಮಾ ಎನಿಸಿಕೊಂಡಿರುವ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ: ಭಾಗ 1’ ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ರಣಬೀರ್ ಕಪೂರ್ ಹಾಗೂ ಯಶ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರವು ಬರೋಬ್ಬರಿ 1500 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡು ಮುನ್ನುಗ್ಗುತ್ತಿದೆ. ಆದರೆ, ಸುಮಾರು 2000 ಕೋಟಿ ರೂಪಾಯಿ ಬೃಹತ್ ವೆಚ್ಚದಲ್ಲಿ ನಿರ್ಮಾಣವಾದ ಈ ಚಿತ್ರದ ಲಾಭ-ನಷ್ಟದ ಲೆಕ್ಕಾಚಾರ ಈಗ ಬಾಲಿವುಡ್‌ ನಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಈ ನಡುವೆ ಕಡಿಮೆ ವೆಚ್ಚದಲ್ಲಿ ಸಿನಿಮಾ ಮಾಡಿ ಬಾಕ್ಸ್ ಆಫೀಸ್‌ನಲ್ಲಿ 450 ಕೋಟಿ ರೂಪಾಯಿ ಬಾಚಿಕೊಂಡ ‘ಹನುಮಾನ್ ಅಂಶ್’ ಚಿತ್ರದ ನಿರ್ದೇಶಕ ವಿಶಾಲ್ ಚತುರ್ವೇದಿ ನೀಡಿರುವ ಹೇಳಿಕೆ ಈಗ ಸಂಚಲನ ಮೂಡಿಸಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, “ಕೆಲಸದ ಒತ್ತಡದಿಂದ ನಾನು ಇನ್ನೂ ‘ರಾಮಾಯಣ’ ಸಿನಿಮಾ ನೋಡಿಲ್ಲ, ಆದರೆ ನೋಡಲು ಬಹಳ ಉತ್ಸುಕನಾಗಿದ್ದೇನೆ” ಎಂದಿದ್ದಾರೆ. ಇದೇ ವೇಳೆ ಸಿನಿಮಾ ನಿರ್ಮಾಣದ ಆರ್ಥಿಕ ಶಿಸ್ತಿನ ಬಗ್ಗೆ ಮಾತನಾಡುತ್ತಾ ದೊಡ್ಡ ಬಜೆಟ್ ಚಿತ್ರಗಳಿಗೆ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ.

ಚಿತ್ರರಂಗದ ವ್ಯವಹಾರದ ಗುಟ್ಟನ್ನು ಬಿಚ್ಚಿಟ್ಟ ವಿಶಾಲ್, “ಯಾವುದೇ ಸಿನಿಮಾ ಮಾಡುವ ಮುನ್ನ ಕಾಗದದ ಮೇಲೆ ಲೆಕ್ಕಾಚಾರ ಪಕ್ಕಾ ಇರಬೇಕು. ಒಂದು ವೇಳೆ ನೀವು 200 ಕೋಟಿ ರೂಪಾಯಿ ಹೂಡಿಕೆ ಮಾಡಿ, ಆ ಸಿನಿಮಾ 400 ಕೋಟಿ ಗಳಿಸಲು ವಿಫಲವಾದರೆ ಅದನ್ನು ಚಿತ್ರರಂಗದ ಭಾಷೆಯಲ್ಲಿ ‘ಫ್ಲಾಪ್’ ಎಂದೇ ಕರೆಯಲಾಗುತ್ತದೆ. ಹಾಕಿದ ಬಂಡವಾಳಕ್ಕೆ ತಕ್ಕ ಲಾಭ ಬಂದಾಗ ಮಾತ್ರ ಆ ಸಿನಿಮಾ ಗೆದ್ದಂತೆ” ಎಂದು ನೇರವಾಗಿ ಅಭಿಪ್ರಾಯಪಟ್ಟಿದ್ದಾರೆ.

ಭಾರಿ ಬಜೆಟ್ ಸಿನಿಮಾಗಳು ಯಾಕೆ ಮುಗ್ಗರಿಸುತ್ತವೆ ಎಂಬುದಕ್ಕೂ ಉತ್ತರ ನೀಡಿರುವ ಅವರು, “ನಿರ್ದೇಶಕರಿಗೆ ಸಿನಿಮಾದ ಒಟ್ಟು ವೆಚ್ಚದ ಮೇಲೆ ಹಿಡಿತವಿರಬೇಕು. ಕೆಲವೊಮ್ಮೆ ಕೋಟ್ಯಂತರ ರೂಪಾಯಿ ಸುರಿದು ಅದ್ಧೂರಿಯಾಗಿ ಸಿನಿಮಾ ಮಾಡಿದರೂ, ನಿರೀಕ್ಷಿತ ಗಳಿಕೆ ಕಾಣದೆ ಸೋಲುತ್ತವೆ. ಆದ್ದರಿಂದ ಬಜೆಟ್ ಜೊತೆಗೆ ಗಟ್ಟಿಯಾದ ಚಿತ್ರಕಥೆ ಇರುವುದು ಬಹಳ ಮುಖ್ಯ” ಎಂದಿದ್ದಾರೆ.

2000 ಕೋಟಿ ವೆಚ್ಚದ ‘ರಾಮಾಯಣ’ ಚಿತ್ರವು 1500 ಕೋಟಿ ಗಳಿಸಿರುವ ಈ ಹೊತ್ತಿನಲ್ಲಿ ವಿಶಾಲ್ ಅವರ ಈ ಮಾತುಗಳು ನೇರವಾಗಿ ಆ ಚಿತ್ರವನ್ನೇ ಗುರಿಯಾಗಿಸಿಕೊಂಡಂತಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಚರ್ಚಿಸುತ್ತಿದ್ದಾರೆ. ಒಟ್ಟಿನಲ್ಲಿ ಸಣ್ಣ ಬಜೆಟ್‌ನಲ್ಲಿ ದೊಡ್ಡ ಯಶಸ್ಸು ಕಂಡ ನಿರ್ದೇಶಕನ ಈ ಮಾತು ಈಗ ಬಾಲಿವುಡ್‌ನ ಬಿಗ್ ಬಜೆಟ್ ಮಂದಿಯ ನಿದ್ದೆಗೆಡಿಸಿರುವುದಂತೂ ಸುಳ್ಳಲ್ಲ.

Must Read