November 22, 2026
Sunday, November 22, 2026
spot_img

ಗಲ್ಲಾಪೆಟ್ಟಿಗೆಯಲ್ಲಿ ‘O.M ಚಾಪ್ಟರ್ 1’ ಅಬ್ಬರ: ಎರಡೇ ದಿನಕ್ಕೆ 36.75 ಕೋಟಿ ರೂ. ಭರ್ಜರಿ ಗಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಚಿತ್ರರಂಗದ ದಿಗ್ಗಜರಾದ ಧನುಷ್, ಮಮ್ಮುಟ್ಟಿ ಹಾಗೂ ಸಾಯಿ ಪಲ್ಲವಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ ಚಿತ್ರ ‘O.M ಚಾಪ್ಟರ್ 1’ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಈ ಚಿತ್ರವು ಬಿಡುಗಡೆಯಾದ ಎರಡನೇ ದಿನವೂ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಮೊದಲ ದಿನ ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದ ಈ ಚಿತ್ರ, ಎರಡನೇ ದಿನವಾದ ಶನಿವಾರ ಭಾರತದ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 17 ಕೋಟಿ ರೂಪಾಯಿ ಗಳಿಸಿದೆ. ಮೊದಲ ದಿನಕ್ಕೆ ಹೋಲಿಸಿದರೆ ಎರಡನೇ ದಿನದ ಗಳಿಕೆಯಲ್ಲಿ ಕೇವಲ ಶೇ. 15 ರಷ್ಟು ಮಾತ್ರ ಇಳಿಕೆಯಾಗಿದ್ದು, ಸಿನಿಮಾ ಗಟ್ಟಿಯಾಗಿ ನೆಲೆಯೂರಿರುವುದಕ್ಕೆ ಸಾಕ್ಷಿಯಾಗಿದೆ. ಈ ಮೂಲಕ ಚಿತ್ರದ ಎರಡು ದಿನಗಳ ಒಟ್ಟು ಗಳಿಕೆ 36.75 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.

‘ವುಂಡರ್‌ಬಾರ್ ಫಿಲ್ಮ್ಸ್’ ನಿರ್ಮಾಣದ ಈ ಚಿತ್ರಕ್ಕೆ ತವರು ರಾಜ್ಯ ತಮಿಳುನಾಡಿನಲ್ಲಿ ಎರಡನೇ ದಿನ ಕೊಂಚ ಹಿನ್ನಡೆಯಾದರೂ, ಒಟ್ಟಾರೆ ಎರಡು ದಿನಗಳಲ್ಲಿ 16.25 ಕೋಟಿ ರೂ. ಕಲೆಹಾಕಿದೆ. ಆದರೆ, ನೆರೆ ರಾಜ್ಯಗಳಲ್ಲಿ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಚಿತ್ರದ ಬಗ್ಗೆ ಪ್ರೇಕ್ಷಕರಿಂದ ಉತ್ತಮ ಮಾತುಗಳು ಕೇಳಿಬರುತ್ತಿರುವುದು ಚಿತ್ರತಂಡಕ್ಕೆ ದೊಡ್ಡ ಬಲ ತಂದಿದೆ. ಭಾನುವಾರದ ರಜಾದಿನದ ಲಾಭವೂ ಚಿತ್ರಕ್ಕೆ ಸಿಗಲಿದ್ದು, ಮೊದಲ ವಾರಾಂತ್ಯದ ಅಂತ್ಯಕ್ಕೆ ಭಾರತದ ಗಲ್ಲಾಪೆಟ್ಟಿಗೆಯಲ್ಲಿ 50 ಕೋಟಿ ರೂಪಾಯಿಗಳ ಗಡಿ ದಾಟುವ ನಿರೀಕ್ಷೆಯಿದೆ. ಮುಂದಿನ ವಾರದ ದಿನಗಳಲ್ಲಿ ಈ ಸಿನಿಮಾ ಹೇಗೆ ಪ್ರದರ್ಶನ ನೀಡಲಿದೆ ಎಂಬುದರ ಮೇಲೆ ಚಿತ್ರದ ದೀರ್ಘಕಾಲದ ಯಶಸ್ಸು ನಿರ್ಧಾರವಾಗಲಿದೆ.

Must Read