ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಅಕ್ಟೋಬರ್ ತಿಂಗಳಲ್ಲಿ ತಮ್ಮ ಕಾರಿನ ಮೇಲೆ ನಡೆದ ಗುಂಡಿನ ದಾಳಿಯ ಆಘಾತದಿಂದ ಹೊರಬಂದಿರುವ ಬಾಲಿವುಡ್ ನಟ ಟೈಗರ್ ಶ್ರಾಫ್, ಇದೀಗ ಮತ್ತೆ ವೇದಿಕೆಯ ಮೇಲೆ ತಮ್ಮ ಅದ್ಭುತ ನೃತ್ಯದ ಮೂಲಕ ಅಬ್ಬರಿಸಿದ್ದಾರೆ. ಶನಿವಾರ ಮುಂಬೈನ ಐತಿಹಾಸಿಕ ಗೇಟ್ವೇ ಆಫ್ ಇಂಡಿಯಾ ಮುಂಭಾಗದಲ್ಲಿ ನಡೆದ ‘ಗ್ಲೋಬಲ್ ಪೀಸ್ ಆನರ್ಸ್ 2026’ ಕಾರ್ಯಕ್ರಮದಲ್ಲಿ ಟೈಗರ್ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರದರ್ಶನ ನೀಡಿದರು.
ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಟೈಗರ್ ಶ್ರಾಫ್, ‘ಅಗ್ನಿಪಥ್’ ಸಿನಿಮಾದ ಜನಪ್ರಿಯ ಗೀತೆ ‘ದೇವಾ ಶ್ರೀ ಗಣೇಶ’ ಹಾಡಿಗೆ ಅತ್ಯಂತ ಉತ್ಸಾಹದಿಂದ ಹೆಜ್ಜೆ ಹಾಕಿದರು. ಭಯೋತ್ಪಾದನೆಯ ವಿರುದ್ಧ ಹೋರಾಡಿದ ವೀರರಿಗೆ ಮತ್ತು ಸಂತ್ರಸ್ತರಿಗೆ ಗೌರವ ಸಲ್ಲಿಸುವ ಈ ವೇದಿಕೆಯಲ್ಲಿ ಟೈಗರ್ ಅವರ ನೃತ್ಯ ನೆರೆದಿದ್ದವರ ಮನಗೆದ್ದಿತು. ಸದ್ಯ ಈ ಕಾರ್ಯಕ್ರಮದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.
ಕಳೆದ ಅಕ್ಟೋಬರ್ 18ರಂದು ಫುಟ್ಬಾಲ್ ಮೈದಾನದಿಂದ ಮನೆಗೆ ಮರಳುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಗುಂಡು ಹಾರಿಸಿದ್ದರು. ಈ ಘಟನೆಯಲ್ಲಿ ಕಾರಿನ ಕನ್ನಡಿ ಜಖಂಗೊಂಡಿದ್ದು, ಟೈಗರ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಆ ಕಹಿ ಘಟನೆಯ ನಂತರ ಅವರು ಇದೇ ಮೊದಲ ಬಾರಿಗೆ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.
ಅಮೃತಾ ಫಡ್ನವಿಸ್ ಅವರ ‘ದಿವ್ಯಾಜ್ ಫೌಂಡೇಶನ್’ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಶಾರುಖ್ ಖಾನ್, ಸಚಿನ್ ತೆಂಡೂಲ್ಕರ್, ರಣವೀರ್ ಸಿಂಗ್, ಅಕ್ಷಯ್ ಕುಮಾರ್ ಮತ್ತು ವಿಕ್ರಾಂತ್ ಮಾಸ್ಸೆ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಇತ್ತೀಚೆಗಷ್ಟೇ ಪುಣೆಯಲ್ಲಿ ಜಾಹ್ನವಿ ಕಪೂರ್ ಅವರೊಂದಿಗೆ ‘ಲಗ್ ಜಾ ಗಲೇ’ ಚಿತ್ರದ ಹಾಡಿನ ಚಿತ್ರೀಕರಣ ಮುಗಿಸಿರುವ ಟೈಗರ್, ಈಗ ತಮ್ಮ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಗುಂಡಿನ ದಾಳಿಯ ನಂತರ ಎಚ್ಚೆತ್ತುಕೊಂಡಿರುವ ನಟ, ತಮ್ಮ ಚಿತ್ರೀಕರಣದ ವೇಳಾಪಟ್ಟಿ ಮತ್ತು ತಾವಿರುವ ಸ್ಥಳದ ಮಾಹಿತಿಯನ್ನು ಯಾರಿಗೂ ಬಿಟ್ಟುಕೊಡದಂತೆ ತಮ್ಮ ತಂಡದ ಸದಸ್ಯರಿಂದ ಗೌಪ್ಯತಾ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.



