ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾನುವಾರ ಬೆಳ್ಳಂಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ಗನೋಟ್ ಭಾಗದ ಥಾಥಾ ಗ್ರಾಮದಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ನಾಲ್ಕು ಕುಟುಂಬಗಳ ಸೂರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಬೆಂಕಿಯ ತೀವ್ರತೆ ಹೆಚ್ಚಾಗಿದ್ದರೂ, ಯಾವುದೇ ಪ್ರಾಣಾಪಾಯ ಸಂಭವಿಸದೆ ದೊಡ್ಡ ದುರಂತ ತಪ್ಪಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಮನೆಗಳಿಗೆ ಬೆಂಕಿ ಹೊತ್ತಿಕೊಂಡ ವಿಷಯ ತಿಳಿಯುತ್ತಿದ್ದಂತೆಯೇ ಜಿಲ್ಲಾಧಿಕಾರಿ ಮೊಹಮ್ಮದ್ ಅಲ್ಯಾಸ್ ಖಾನ್ ಅವರ ಸೂಚನೆಯ ಮೇರೆಗೆ ಅಗ್ನಿಶಾಮಕ ದಳ, ಕ್ಷಿಪ್ರ ಕಾರ್ಯಪಡೆ ಹಾಗೂ ಪೊಲೀಸ್ ಸಿಬ್ಬಂದಿ ತಕ್ಷಣವೇ ಗ್ರಾಮಕ್ಕೆ ದೌಡಾಯಿಸಿದರು. ಸಿಬ್ಬಂದಿಯ ನಿರಂತರ ಕಾರ್ಯಾಚರಣೆಯಿಂದ ಬೆಂಕಿಯನ್ನು ನಂದಿಸಲಾಗಿದ್ದು, ಪಕ್ಕದ ಮನೆಗಳಿಗೆ ಬೆಂಕಿ ಹರಡದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸೂರು ಕಳೆದುಕೊಂಡ ಕುಟುಂಬಗಳಿಗೆ ಆರ್ಥಿಕ ಬಲ
ಅಗ್ನಿ ಅವಘಡದಿಂದ ಬೀದಿಗೆ ಬಿದ್ದಿರುವ ನಾಲ್ಕು ಕುಟುಂಬಗಳ ಕಣ್ಣೀರು ಒರೆಸಲು ಸರ್ಕಾರ ಮತ್ತು ಸ್ಥಳೀಯ ಜನಪ್ರತಿನಿಧಿಗಳು ತಕ್ಷಣವೇ ನೆರವಿನ ಹಸ್ತ ಚಾಚಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ನಿಧಿಯಡಿ ಪ್ರತಿ ಕುಟುಂಬಕ್ಕೆ 1.5 ಲಕ್ಷ ಪರಿಹಾರ ಮಂಜೂರಾಗಲಿದೆ. ರೆಡ್ ಕ್ರಾಸ್ ಸಂಸ್ಥೆಯು ಸಂತ್ರಸ್ತರಿಗೆ ದಿನಬಳಕೆಯ ಅಗತ್ಯ ವಸ್ತುಗಳ ಜೊತೆಗೆ 50,000 ನಗದು ನೆರವು ನೀಡಿದೆ.
ಸ್ಥಳೀಯ ಶಾಸಕ ಅರ್ಜುನ್ ಸಿಂಗ್ ರಾಜು ಅವರು ತಮ್ಮ ಶಾಸಕರ ನಿಧಿಯಿಂದ ಮನೆ ಕಳೆದುಕೊಂಡ ಪ್ರತಿ ಕುಟುಂಬಕ್ಕೆ ತಲಾ 1 ಲಕ್ಷ ನೀಡುವುದಾಗಿ ಪ್ರಕಟಿಸಿದ್ದಾರೆ. ಈ ಮೂಲಕ ಸಂತ್ರಸ್ತರಿಗೆ ಒಟ್ಟು ಸುಮಾರು 3 ರಿಂದ 3.5 ಲಕ್ಷದವರೆಗೆ ಆರ್ಥಿಕ ನೆರವು ದೊರೆಯಲಿದೆ. ಜೊತೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದಲೂ ಹೆಚ್ಚುವರಿ ನೆರವು ಕೊಡಿಸಲು ಸಿಎಂ ಅವರನ್ನು ಸಂಪರ್ಕಿಸಲಾಗಿದೆ ಎಂದು ಶಾಸಕರು ಹೇಳಿದ್ದಾರೆ.
ಬೆಂಕಿ ನಂದಿಸಲು ಒಂದಾದ ಗ್ರಾಮಸ್ಥರು
ಗ್ರಾಮದಲ್ಲಿ ಬೆಂಕಿ ಕಾಣಿಸಿಕೊಂಡಾಗ ಜಾತಿ-ಧರ್ಮದ ಭೇದವಿಲ್ಲದೆ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಒಟ್ಟಾಗಿ ಸೇರಿ ನೀರು ಹಾಯಿಸಿ ಬೆಂಕಿ ನಂದಿಸಲು ಶ್ರಮಿಸಿದ್ದಾರೆ. ಕಷ್ಟದ ಹೊತ್ತಿನಲ್ಲಿ ನೆರೆಹೊರೆಯವರಿಗೆ ಆಸರೆಯಾಗಿ ನಿಂತು ಸೌಹಾರ್ದತೆ ಮೆರೆದ ಗ್ರಾಮಸ್ಥರ ಕಾರ್ಯಕ್ಕೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿ ಧನ್ಯವಾದ ತಿಳಿಸಿದ್ದಾರೆ.



