November 24, 2026
Tuesday, November 24, 2026
spot_img

ಸೋನಿಯಾ ಗಾಂಧಿ ಆತ್ಮಕಥನಕ್ಕೆ ಕಾನೂನು ಸಂಕಷ್ಟ: ಸಾವರ್ಕರ್ ಮೊಮ್ಮಗನಿಂದ 15 ದಿನಗಳ ಗಡುವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದೇಶದ ರಾಜಕೀಯ ಇತಿಹಾಸದಲ್ಲಿ ಸದಾ ಚರ್ಚೆಗೆ ಗ್ರಾಸವಾಗಿರುವ ವಿನಾಯಕ ದಾಮೋದರ ಸಾವರ್ಕರ್ ಅವರ ವಿಚಾರ ಈಗ ಮತ್ತೊಮ್ಮೆ ರಾಜಕೀಯ ಹಾಗೂ ಕಾನೂನು ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥನದಲ್ಲಿ ಸಾವರ್ಕರ್ ಕುರಿತು ಉಲ್ಲೇಖಿಸಿರುವ ಕೆಲವು ವಿಚಾರಗಳು ವಿವಾದಕ್ಕೆ ಕಾರಣವಾಗಿದ್ದು, ಈ ಹೇಳಿಕೆಗಳ ವಿರುದ್ಧ ಅವರ ಕುಟುಂಬದ ಸದಸ್ಯರು ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಪುಸ್ತಕದಲ್ಲಿನ ವಿವಾದಿತ ಅಂಶಗಳನ್ನು ಸರಿಪಡಿಸಿ, ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಸೋನಿಯಾ ಗಾಂಧಿ ಅವರಿಗೆ ಕಾನೂನು ನೋಟಿಸ್ ಜಾರಿಯಾಗಿದೆ.

ಸಾವರ್ಕರ್ ಅವರ ಮೊಮ್ಮಗ ಸತ್ಯಕಿ ಸಾವರ್ಕರ್ ಪರವಾಗಿ ವಕೀಲ ಸಂಗ್ರಾಮ್ ಕೊಲ್ಹಟ್ಕರ್ ಈ ನೋಟಿಸ್ ನೀಡಿದ್ದಾರೆ. ಸೋನಿಯಾ ಗಾಂಧಿ ಬರೆದಿರುವ Belonging: A Journey of Love ಪುಸ್ತಕದ 201 ಮತ್ತು 443ನೇ ಪುಟಗಳಲ್ಲಿರುವ ಹೇಳಿಕೆಗಳು ಆಧಾರರಹಿತವಾಗಿವೆ. ಅವು ಸಾವರ್ಕರ್ ಅವರ ಜೀವನ, ರಾಜಕೀಯ ನಿಲುವು ಮತ್ತು ಸಿದ್ಧಾಂತವನ್ನು ತಪ್ಪಾಗಿ ಬಿಂಬಿಸುವುದರ ಜತೆಗೆ ಅವರ ಗೌರವಕ್ಕೆ ಧಕ್ಕೆ ತರುತ್ತವೆ ಎಂದು ನೋಟಿಸ್‌ನಲ್ಲಿ ಆಕ್ಷೇಪಿಸಲಾಗಿದೆ.

ಇದನ್ನೂ ಓದಿ:

ಪುಸ್ತಕದ 201ನೇ ಪುಟದಲ್ಲಿ ಸಾವರ್ಕರ್ ಅವರು ಬ್ರಿಟಿಷರಿಗೆ ಕ್ಷಮಾದಾನ ಅರ್ಜಿಗಳನ್ನು ಸಲ್ಲಿಸಿದ್ದರು ಹಾಗೂ ಆರ್‌ಎಸ್‌ಎಸ್‌ನ ಕೆಲವರು ಬ್ರಿಟಿಷ್ ಅಧಿಕಾರಿಗಳಿಗೆ ಮಾಹಿತಿದಾರರಾಗಿ ಕೆಲಸ ಮಾಡಿದ್ದರು ಎಂಬ ಉಲ್ಲೇಖವಿದೆ. ಈ ಹೇಳಿಕೆಗಳು ಸಾವರ್ಕರ್ ಅವರು ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಬ್ರಿಟಿಷರಿಗೆ ಸಹಕರಿಸಿದ್ದರು ಎಂಬ ತಪ್ಪು ಅಭಿಪ್ರಾಯ ಮೂಡಿಸುತ್ತವೆ ಎಂದು ಸತ್ಯಕಿ ಆರೋಪಿಸಿದ್ದಾರೆ. ಅಂಡಮಾನ್‌ನ ಸೆಲ್ಯುಲರ್ ಜೈಲಿನಲ್ಲಿನ ಕಠಿಣ ಸೆರೆವಾಸ ಸೇರಿದಂತೆ ಅವರು ಅನುಭವಿಸಿದ ಯಾತನೆ ಮತ್ತು ಅಂದಿನ ಐತಿಹಾಸಿಕ ಸಂದರ್ಭಗಳನ್ನು ಪರಿಗಣಿಸದೆ ಈ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ ಎಂಬುದು ಅವರ ಆಕ್ಷೇಪ.

ಇನ್ನು 443ನೇ ಪುಟದಲ್ಲಿ ಸಾವರ್ಕರ್ ಅವರ ಹಿಂದೂತ್ವ ಸಿದ್ಧಾಂತವನ್ನು ಹಿಂದೂಗಳೇ ಪ್ರಧಾನವಾಗಿರುವ ರಾಷ್ಟ್ರದ ಪರಿಕಲ್ಪನೆಯಾಗಿ ವಿವರಿಸಿರುವುದಕ್ಕೂ ನೋಟಿಸ್ ವಿರೋಧ ವ್ಯಕ್ತಪಡಿಸಿದೆ. ಇದು ಅವರ ರಾಜಕೀಯ ಚಿಂತನೆಯ ತಪ್ಪು ಚಿತ್ರಣ ಎಂದು ಹೇಳಲಾಗಿದೆ.

ನೋಟಿಸ್ ಸ್ವೀಕರಿಸಿದ 15 ದಿನಗಳೊಳಗೆ ಕ್ಷಮೆಯಾಚನೆ, ಸ್ಪಷ್ಟನೆ ಮತ್ತು ತಿದ್ದುಪಡಿ ಮಾಡಬೇಕು ಎಂದು ಗಡುವು ನೀಡಲಾಗಿದೆ. ಇಲ್ಲವಾದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ.

Must Read