ಹೊಸದಿಗಂತ ವರದಿ ಕಲಬುರಗಿ:
ಕರ್ನಾಟಕದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಎರಡನೇ ಅವಧಿಗೂ ರಾಜ್ಯಾಧ್ಯಕ್ಷರನ್ನಾಗಿ ಮುಂದುವರಿಸಬೇಕು ಎಂದು ಆಗ್ರಹಿಸಿ, ಕಲಬುರಗಿಯ ಬಿಜೆಪಿ ಕಾರ್ಯಕರ್ತ ಆನಂದ ಕಣಸೂರ್ ಅವರು ತಮ್ಮ ರಕ್ತದಿಂದ ಪತ್ರ ಬರೆದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ನಗರದ ಜಗತ್ ವೃತ್ತದಲ್ಲಿರುವ ವಿಶ್ವಗುರು ಬಸವಣ್ಣನವರ ಮೂರ್ತಿಯ ಮುಂಭಾಗದಲ್ಲಿ ವಿನೂತನ ರೀತಿಯಲ್ಲಿ ಈ ಮನವಿ ಸಲ್ಲಿಸಲಾಯಿತು.
ವಿಜಯೇಂದ್ರ ಅವರು ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲರನ್ನೂ ಗಣನೆಗೆ ತೆಗೆದುಕೊಳ್ಳುವ ಮೂಲಕ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುತ್ತಿದ್ದಾರೆ. ರಾಜ್ಯಾದ್ಯಂತ ಪಕ್ಷದ ಸಂಘಟನೆ ಬಲವರ್ಧನೆಗೆ ಶ್ರಮಿಸುತ್ತಿದ್ದು, ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಸಂಘಟನಾತ್ಮಕ ಸಾಮರ್ಥ್ಯ ಹಾಗೂ ಪಕ್ಷದ ಬೆಳವಣಿಗೆಗೆ ನೀಡುತ್ತಿರುವ ಕೊಡುಗೆಯನ್ನು ಪರಿಗಣಿಸಿ ಎರಡನೇ ಅವಧಿಗೂ ರಾಜ್ಯಾಧ್ಯಕ್ಷರನ್ನಾಗಿ ಮುಂದುವರಿಸಬೇಕು ಎಂಬ ತಮ್ಮ ಒತ್ತಾಯವನ್ನು ರಕ್ತಪತ್ರದ ಮೂಲಕ ರಾಷ್ಟ್ರೀಯ ನಾಯಕರ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ರಮೇಶ್ ತೆಗ್ಗಿನಮನಿ, ಮಂಜು ವಾರದ್, ಕಿರಣ್ ಕಣ್ಣಿ, ಅಣ್ಣಾರಾಯ್ ಹಿರೇಗೌಡ, ವೀರೇಶ್ ತೊಂಡಕಲ್, ರಾಜಶೇಖರ್ ಬೋಲೇವಾವಾಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



