November 25, 2026
Wednesday, November 25, 2026
spot_img

‘ಬ್ರಹ್ಮಾಸ್ತ್ರ 2’ ನಿಂತಿಲ್ಲ, ಮತ್ತೆ ಬರ್ತಿದೆ: ಎರಡನೇ ಭಾಗದಲ್ಲಿ ಇರಲಿದೆ ಅಪ್ಪಟ ಭಾರತೀಯ ಸೊಗಡು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಬಹುನಿರೀಕ್ಷಿತ ಫ್ಯಾಂಟಸಿ ಸಿನಿಮಾ ‘ಬ್ರಹ್ಮಾಸ್ತ್ರ’ದ ಎರಡನೇ ಭಾಗ ನಿಂತೇ ಹೋಗಿದೆ ಎಂಬ ವದಂತಿಗಳಿಗೆ ನಿರ್ದೇಶಕ ಅಯಾನ್ ಮುಖರ್ಜಿ ತೆರೆ ಎಳೆದಿದ್ದಾರೆ. ‘ಬ್ರಹ್ಮಾಸ್ತ್ರ 2’ ಖಂಡಿತವಾಗಿಯೂ ಬರಲಿದೆ ಎಂದು ಸ್ಪಷ್ಟಪಡಿಸಿರುವ ಅವರು, ಮೊದಲ ಭಾಗಕ್ಕಿಂತ ಎರಡನೇ ಭಾಗವು ಇನ್ನಷ್ಟು ದೇಸಿ ಸೊಗಡಿನೊಂದಿಗೆ ಮೂಡಿಬರಲಿದೆ ಎಂದು ಭರವಸೆ ನೀಡಿದ್ದಾರೆ.

ಗೋವಾದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂವಾದವೊಂದರಲ್ಲಿ ಮಲಯಾಳಂ ನಿರ್ದೇಶಕ ಬಾಸಿಲ್ ಜೋಸೆಫ್ ಅವರೊಂದಿಗೆ ಭಾಗವಹಿಸಿದ್ದ ಅಯಾನ್ ಮುಖರ್ಜಿ, ತಮ್ಮ ಕನಸಿನ ಪ್ರಾಜೆಕ್ಟ್ ಬಗ್ಗೆ ಹಲವು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡರು. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ 2022ರ ‘ಬ್ರಹ್ಮಾಸ್ತ್ರ’ ಸಿನಿಮಾ ಸುಮಾರು 350 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗಿ, ವಿಶ್ವಾದ್ಯಂತ 435 ಕೋಟಿಗೂ ಅಧಿಕ ಗಳಿಕೆ ಕಂಡಿತ್ತು. ಆದರೂ, ಬಜೆಟ್‌ಗೆ ಹೋಲಿಸಿದರೆ ಅದು ಸಾಧಾರಣ ಯಶಸ್ಸು ಎನಿಸಿಕೊಂಡಿತ್ತು ಹಾಗೂ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಮೊದಲ ಭಾಗದ ಏಳುಬೀಳುಗಳ ಬಗ್ಗೆ ಮಾತನಾಡಿದ ಅಯಾನ್, “ಬ್ರಹ್ಮಾಸ್ತ್ರಕ್ಕೆ ಆರಂಭದಲ್ಲಿ ಸ್ವಲ್ಪ ಏರಿಳಿತದ ಸ್ವಾಗತ ಸಿಕ್ಕಿತು. ಚಿತ್ರದಲ್ಲಿ ಜನರಿಗೆ ಇಷ್ಟವಾದ ಹಲವು ಅಂಶಗಳಿದ್ದವು, ಹಾಗೆಯೇ ಇಷ್ಟವಾಗದ ಕೆಲವು ಸಂಗತಿಗಳೂ ಇದ್ದವು. ಯಾವುದೇ ಸಿನಿಮಾವನ್ನು ಪ್ರೇಕ್ಷಕರು ಸೋಲಿಸುತ್ತಾರೆ ಎಂದು ನಾನು ಭಾವಿಸುವುದಿಲ್ಲ. ನಮ್ಮ ಪ್ರೇಕ್ಷಕರು ತುಂಬಾ ಬುದ್ಧಿವಂತರು. ಅವರಿಗೆ ಏನಾದರೂ ಇಷ್ಟವಾಗದಿದ್ದರೆ, ನಾವು ನಮ್ಮ ಕಥೆ ಹೇಳುವ ಶೈಲಿಯನ್ನು ಇನ್ನಷ್ಟು ಸುಧಾರಿಸಿಕೊಳ್ಳಬೇಕು ಎಂದರ್ಥ” ಎಂದು ಒಪ್ಪಿಕೊಂಡರು.

ತಮ್ಮ ಸಿನಿಮಾದ ಶೈಲಿಯ ಬದಲಾವಣೆಯ ಬಗ್ಗೆ ವಿವರಿಸಿದ ಅವರು, “ನಾನು ‘ಬ್ರಹ್ಮಾಸ್ತ್ರ’ ಶುರು ಮಾಡಿದಾಗ ನನ್ನ ಮನಸ್ಸಿನಲ್ಲಿ ಹಾಲಿವುಡ್‌ನ ‘ಹ್ಯಾರಿ ಪಾಟರ್’ ಮತ್ತು ‘ದಿ ಲಾರ್ಡ್ ಆಫ್ ದಿ ರಿಂಗ್ಸ್’ ನಂತಹ ಸಿನಿಮಾಗಳ ಪ್ರಭಾವವಿತ್ತು. ಆದರೆ ಸಿನಿಮಾ ಬೆಳೆದಂತೆ ನಾನು ಭಾರತೀಯ ಆಧ್ಯಾತ್ಮಿಕತೆಯತ್ತ ಆಕರ್ಷಿತನಾದೆ. ಇದೇ ಕಾರಣಕ್ಕೆ ಚಿತ್ರದ ಹೆಸರನ್ನು ‘ಡ್ರ್ಯಾಗನ್’ ಬದಲಿಗೆ ‘ಬ್ರಹ್ಮಾಸ್ತ್ರ’ ಎಂದು ಬದಲಾಯಿಸಿದೆ. ಈಗ ಎರಡನೇ ಭಾಗವನ್ನು ಇನ್ನಷ್ಟು ಅಪ್ಪಟ ಭಾರತೀಯ ಶೈಲಿಯಲ್ಲಿ ಕಟ್ಟಿಕೊಡುವ ಆಶಯ ನನ್ನದು” ಎಂದು ತಿಳಿಸಿದ್ದಾರೆ. ಈ ಮೂಲಕ ‘ಬ್ರಹ್ಮಾಸ್ತ್ರ 2’ ಮೇಲೆ ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಹುಟ್ಟುಹಾಕಿದ್ದಾರೆ.

Must Read

Skip to toolbar