ಹೊಸದಿಗಂತ ವರದಿ ಹುಬ್ಬಳ್ಳಿ:
ಪ್ರೀತಿ ನಿರಾಕರಿಸಿದ ಕಾರಣಕ್ಕೆ ಅಂಜಲಿ ಅಂಬಿಗೇರ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿ ವಿಶ್ವನಾಥ ಉ- ಗಿರೀಶ ಸಾವಂತನಿಗೆ ಬುಧವಾರ ಒಂದನೇ ಹೆಚ್ಚವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 45 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
2024ರ ಮೇ 15 ರಂದು ವೀರಾಪುರ ಓಣಿ ಕರಿಯಮ್ಮ ದೇವಿ ದೇವಸ್ಥಾನ ಬಳಿಯ ನಿವಾಸಿ ಅಂಜಲಿ ಅಂಬಿಗೇರ(20) ಎಂಬುವಳನ್ನು ಮನೆಗೆ ನುಗ್ಗಿ ಚಾಕುವಿನಿಂದ ಬರ್ಬರವಾಗಿ ಇರಿದು ಕೊಲೆ ಮಾಡಿ ಗಿರೀಶ ಪರಾರಿಯಾಗಿದ್ದ. ನಂತರ ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಆತನನ್ನು ಬಂಧಿಸಿದ್ದರು.
ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ರಾಜ್ಯದ್ಯಂತ ದೊಡ್ಡ ಸುದ್ದಿಯಾದ ಹಿನ್ನೆಲೆ ಸರ್ಕಾರ ತನಿಖೆ ನಡೆಸಲು ಸಿಐಡಿಗೆ ನೀಡಿತ್ತು. ಸಿಐಡಿ ಎಸ್ಪಿ ಓ. ವೆಂಕಟೇಶ್ ಅವರ ಮೇಲ್ವಿಚಾರಣೆಯಲ್ಲಿ ಡಿವೈಎಸ್ಪಿ ಎಂ.ಎಚ್. ಉಮೇಶ ಇವರು ತನಿಖೆ ನಡೆಸಿ 435 ಪುಟಗಳ ದೋಷಾರೋಪ ಪಟ್ಟಿಯಲ್ಲಿ 85 ಜನ ಸಾಕ್ಷಿಯ ವಿವರಣೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಇದನ್ನೂ ಓದಿ:
ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು ಅಪರಾಧಿಗೆ ಜೀವಾವಧಿ, ಸಾಕ್ಷಿ ನಾಶಕ್ಕೆ ಮೂರು ವರ್ಷ, ಮನೆಯಲ್ಲಿ ನುಗ್ಗಿ ಗಲಾಟೆ ಮಾಡಿದ್ದಕ್ಕೆ ಎರಡು ವರ್ಷ ಶಿಕ್ಷೆ ಜೊತೆಗೆ 45ಸಾವಿರ ರೂ. ದಂಡ ವಿಧಿಸಿದೆ. ದಂಡದಲ್ಲಿ 43ಸಾವಿರ ರೂ. ಪರಿಹಾರವನ್ನು ಅಂಜಲಿ ಸಹೋದರಿ ಯುಶೋಧಾಗೆ, ಎರಡು ಸಾವಿರ ರೂ.ವನ್ನು ಸರ್ಕಾರಕ್ಕೆ ನೀಡಬೇಕೆಂದು ಆದೇಶಿಸಿದೆ.
ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧಿಶರಾದ ಪಲ್ಲವಿ ಬಿ.ಆರ್. ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸಿಐಡಿ ವಿಶೇಷ ಸರ್ಕಾರಿ ಅಭಿಯೋಜಕ ಆರ್.ಕೆ. ಕಾಳೆ ವಾದ ಮಂಡಿಸಿದ್ದರು.



