ಇಂದಿನ ಕಾಲದಲ್ಲಿ ತೂಕ ಇಳಿಸುವುದು ಬಹುತೇಕ ಜನರಿಗೆ ಒಂದು ದೊಡ್ಡ ಸವಾಲಾಗಿದೆ. ಆಹಾರ ಕ್ರಮದಿಂದ ಹಿಡಿದು ದಿನನಿತ್ಯದ ಚಟುವಟಿಕೆಗಳಲ್ಲಿ ಅನೇಕ ಬದಲಾವಣೆಗಳನ್ನು ತರುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಸಕ್ಕರೆಯನ್ನು ಬಿಟ್ಟು ಯಾವ ಪರ್ಯಾಯ ಬಳಸಬೇಕು ಎಂಬ ಪ್ರಶ್ನೆ ಹಲವರಲ್ಲೂ ಗೊಂದಲ ಮೂಡಿಸಿದೆ. ಇದರ ನಡುವೆ ಬೆಲ್ಲ ಹಾಗೂ ಜೇನುತುಪ್ಪ ಯಾವುದು ಉತ್ತಮ ಎಂಬ ಚರ್ಚೆ ಹೆಚ್ಚು ನಡೆಯುತ್ತಿದೆ.
ಬೆಲ್ಲದ ವಿಶೇಷತೆ
ಕಬ್ಬಿನ ರಸದಿಂದ ತಯಾರಾಗುವ ಬೆಲ್ಲವು ಸಕ್ಕರೆಗೆ ಹೋಲಿಸಿದರೆ ಆರೋಗ್ಯಕರ ಪರ್ಯಾಯ. ಇದರಲ್ಲಿ ಕಬ್ಬಿಣ, ಪೊಟ್ಯಾಸಿಯಂ, ಕ್ಯಾಲ್ಸಿಯಂ ಹಾಗೂ ಮ್ಯಾಗ್ನೀಶಿಯಂ ಅಂಶಗಳಿವೆ. ಶಕ್ತಿ ಹೆಚ್ಚಿಸಲು ಹಾಗೂ ಆ್ಯಕ್ಟಿವ್ ಲೈಫ್‌ಸ್ಟೈಲ್‌ಗೆ ಬೆಲ್ಲ ಸಹಕಾರಿ. 100 ಗ್ರಾಂ ಬೆಲ್ಲದಲ್ಲಿ 383 ಕ್ಯಾಲರೀಸ್, 98.5 ಗ್ರಾಂ ಕಾರ್ಬೋಹೈಡ್ರೇಟ್ಸ್ ಹಾಗೂ 0.4 ಗ್ರಾಂ ಪ್ರೋಟೀನ್ ಇರುತ್ತದೆ. ಇದರ ಗ್ಲೈಸೆಮಿಕ್ ಇಂಡೆಕ್ಸ್ 84 ರಿಂದ 94ರಷ್ಟು. ಈ ಅಂಶ ತೂಕ ನಿಯಂತ್ರಣಕ್ಕೆ ಸಹಕಾರಿಯಾದರೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಬೇಗನೆ ಹೆಚ್ಚಿಸುವ ಸಾಧ್ಯತೆಯಿದೆ.

ಜೇನುತುಪ್ಪದ ವಿಶೇಷತೆ
ಜೇನುತುಪ್ಪ ನೈಸರ್ಗಿಕವಾಗಿ ದೊರೆಯುವ ಸಿಹಿ ಪದಾರ್ಥ. ಇದರಲ್ಲಿ 100 ಗ್ರಾಂಗೆ 304 ಕ್ಯಾಲರೀಸ್, 82 ಗ್ರಾಂ ಕಾರ್ಬೋಹೈಡ್ರೇಟ್ಸ್ ಹಾಗೂ 0.3 ಗ್ರಾಂ ಪ್ರೋಟೀನ್ ಇರುತ್ತದೆ. ಗ್ಲೈಸೆಮಿಕ್ ಇಂಡೆಕ್ಸ್ 45 ರಿಂದ 64ರಷ್ಟು ಮಾತ್ರವಾಗಿದ್ದು, ರಕ್ತದಲ್ಲಿ ಸಕ್ಕರೆ ನಿಧಾನವಾಗಿ ಬಿಡುಗಡೆ ಆಗಲು ಸಹಕಾರಿಯಾಗುತ್ತದೆ. ಹೀಗಾಗಿ ತೂಕ ಇಳಿಸಲು ಬೆಲ್ಲಕ್ಕಿಂತ ಜೇನುತುಪ್ಪ ಹೆಚ್ಚು ಪರಿಣಾಮಕಾರಿ ಎಂದು ತಜ್ಞರು ಹೇಳುತ್ತಾರೆ.

ಸಕ್ಕರೆಯ ಪರ್ಯಾಯವಾಗಿ ಬೆಲ್ಲ ಮತ್ತು ಜೇನುತುಪ್ಪ ಎರಡೂ ಉತ್ತಮವಾದರೂ, ತೂಕ ಇಳಿಸುವ ಉದ್ದೇಶ ಹೊಂದಿರುವವರಿಗೆ ಜೇನುತುಪ್ಪ ಹೆಚ್ಚು ಸೂಕ್ತ. ಬೆಲ್ಲವು ಶಕ್ತಿಗಾಗಿ ಉತ್ತಮವಾದರೆ, ಜೇನುತುಪ್ಪ ರಕ್ತ ಸಕ್ಕರೆ ಮಟ್ಟ ನಿಯಂತ್ರಣ ಮತ್ತು ತೂಕ ಇಳಿಕೆಗೆ ಸಹಾಯಕ. ಹೀಗಾಗಿ ದಿನನಿತ್ಯದ ಆಹಾರ ಕ್ರಮದಲ್ಲಿ ಸಕ್ಕರೆಯ ಬದಲು ಜೇನುತುಪ್ಪವನ್ನು ಅಳವಡಿಸಿಕೊಂಡರೆ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.