ಹೊಸದಿಗಂತ ವರದಿ ಮಡಿಕೇರಿ:
ತೋಟಕ್ಕೆ ಕದಿರು ಕಟ್ಟಲೆಂದು ತೆರಳಿದ ಮಾಲಕ ಕಾಡಾನೆ ದಾಳಿಗೆ ಬಲಿಯಾದ ಘಟನೆ ಗುರುವಾರ ಬೆಳ್ಳಂಬೆಳಗ್ಗೆ ನಡೆದಿದೆ.
ದಕ್ಷಿಣಕೊಡಗಿನ ತಿತಿಮತಿಯ ಅಬ್ಬೂರು ತಾರಿಕಟ್ಟೆ ನಿವಾಸಿ ಕೇಶವಯ್ಯ (50) ಎಂಬವರೇ ಕಾಡಾನೆ ದಾಳಿಗೆ ಬಲಿಯಾದವರಾಗಿದ್ದಾರೆ. ಬುಧವಾರ ರಾತ್ರಿ ಹುತ್ತರಿ ಹಬ್ಬವನ್ನು ಆಚರಿಸಿದ ಬಳಿಕ ಗುರುವಾರ ಬೆಳಗ್ಗೆ 7.30ರ ವೇಳೆಗೆ ತೋಟಕ್ಕೆ ಕದಿರು ಕಟ್ಟಲು ತೆರಳಿದ್ದ ಸಂದರ್ಭ ಏಕಾಏಕಿ ಎದುರಾದ ಕಾಡಾನೆ ಕೇಶವಯ್ಯ ಅವರ ಮೇಲೆ ದಾಳಿ ನಡೆಸಿರುವುದಾಗಿ ಹೇಳಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು, ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದು, ಹಬ್ಬದ ಬೆನ್ನಲ್ಲೇ ಗ್ರಾಮದಲ್ಲಿ ಶೋಕದ ವಾತಾವರಣ ಮನೆಮಾಡಿದೆ. ವನ್ಯಪ್ರಾಣಿಗಳ ಹಾವಳಿಯಿಂದ ಕೊಡಗಿನ ಜನರು ಪ್ರತಿದಿನ ಭಯದಲ್ಲೇ ಬದುಕುವ ಸ್ಥಿತಿ ನಿರ್ಮಾಣವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.



