ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಧರಣಿ ಇಂದು ಹತ್ತನೇ ದಿನಕ್ಕೆ ಕಾಲಿಟ್ಟಿದೆ. ಸಿಎಂ ಡಿ.ಕೆ. ಶಿವಕುಮಾರ್ ಜಪಾನ್ನಿಂದ ವಾಪಾಸಾಗಿದ್ದು, ಇಂದು ಗುಡ್ನ್ಯೂಸ್ ಸಿಗಬಹುದು ಎಂದು ಕಾರ್ಯಕರ್ತೆಯರು ಕಾದು ಕುಳಿತಿದ್ದಾರೆ.
ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ 10ನೇ ದಿನಕ್ಕೆ ಕಾಲಿಟ್ಟಿದ್ದು, ಸಿನಿಮಾ ತಾರೆಯರು ಮತ್ತು ಸಾಹಿತಿಗಳು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು ಸಿಎಂ ಆಶಾ ಕಾರ್ಯಕರ್ತೆಯರ ಮುಖಂಡರ ಜೊತೆ ಮಾತುಕತೆ ನಡೆಸುತ್ತಾರಾ? ಈ ಮಾತುಕತೆ ಸಫಲವಾಗುತ್ತದಾ ಎನ್ನುವ ಕುತೂಹಲ ಆರಂಭವಾಗಿದೆ.
ಕಳೆದ 10 ದಿನಗಳಿಂದ ಆಶಾ ಕಾರ್ಯಕರ್ತೆಯರು ಹೋರಾಟಕ್ಕೆ, ಸ್ಯಾಂಡಲ್ವುಡ್ನ ಮನ ಮಿಡಿದಿದೆ. ನಟಿ ರಮ್ಯಾ, ಮಾಳವಿಕ, ಅವಿನಾಶ್, ತಾರಾ, ಕಾರುಣ್ಯರಾಮ್ ಈಗಾಗಲೇ ಫ್ರೀಡಂಪಾರ್ಕ್ಗೆ ಬಂದು, ಆಶಾ ಕಾರ್ಯಕರ್ತೆಯರ ಜೊತೆ ಕೈ ಜೋಡಿಸಿ, ಬೆಂಬಲ ಸೂಚಿಸಿದ್ದಾರೆ. ಮತ್ತಷ್ಟು ಸೆಲೆಬ್ರಿಟಿಗಳು ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಬೆಂಬಲ ಸೂಚಿಸಲು ಮುಂದಾಗಿದ್ದಾರೆ. ಇದರಿಂದ ಹೋರಾಟಕ್ಕೆ ಮತ್ತಷ್ಟು ಮೆರೆಗು ಹೆಚ್ಚಾಗಿದ್ದು, ಹೋರಾಟದ ಕಾವು ಹೆಚ್ಚಾಗಲಿದೆ.
ಇಷ್ಟು ದಿನ ಚಳಿಯಲ್ಲಿ ರಾತ್ರಿಯಿಡೀ ನಡುಗುತ್ತಿದ್ದ ಕಾರ್ಯಕರ್ತೆಯರಿಗೆ ಇದೀಗ ಮಳೆಯೂ ಕಾಟ ಕೊಡುತ್ತಿದೆ. ಟಾರ್ಪಲ್ಗಳ ಕೆಳಗೆ ಹನಿಯುವ ನೀರಿನ ಮಧ್ಯದಲ್ಲಿಯೇ ಆಶಾ ಕಾರ್ಯಕರ್ತೆಯರು ಆಸೆ ಬಿಡದೇ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. ಜೀವ ಹೋಗಲಿ ಆದರೆ ಆರ್ಥಿಕ ಭದ್ರತೆ ಇಲ್ಲದೇ ಮನೆಗೆ ತೆರಳುವುದಿಲ್ಲ ಎಂದು ಶಪಥ ಮಾಡಿದ್ದಾರೆ.



