November 26, 2026
Thursday, November 26, 2026
spot_img

ನಿದ್ದೆ 8 ಗಂಟೆ, ಕೆಲಸ 8 ಗಂಟೆ: ಅಕ್ಷಯ್ ಕುಮಾರ್ ಶಿಸ್ತಿನ ಜೀವನಶೈಲಿಯ ಅಸಲಿ ಗುಟ್ಟು ರಟ್ಟು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ‘ಖಿಲಾಡಿ’ ಅಕ್ಷಯ್ ಕುಮಾರ್ ತಮ್ಮ ಕಟ್ಟುನಿಟ್ಟಿನ ಶಿಸ್ತು ಮತ್ತು ಸಮಯಪಾಲನೆಗೆ ಹೆಸರುವಾಸಿ. ಇತ್ತೀಚೆಗೆ ಕರಣ್ ಜೋಹರ್ ನಡೆಸಿಕೊಡುವ ಜನಪ್ರಿಯ ‘ಕಾಫಿ ವಿತ್ ಕರಣ್’ ಸೀಸನ್ 9ರ ಕಾರ್ಯಕ್ರಮದಲ್ಲಿ ನಟ ರವಿ ಕಿಶನ್ ಅವರೊಂದಿಗೆ ಭಾಗವಹಿಸಿದ್ದ ಅಕ್ಷಯ್, ತಮ್ಮ ಕೆಲಸದ ಶೈಲಿಯ ಬಗ್ಗೆ ಹರಿದಾಡುತ್ತಿರುವ ವದಂತಿಗಳಿಗೆ ಖಡಕ್ ಉತ್ತರ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಹೊಸ ನಿರ್ದೇಶಕರಿಗೆ ಅವಕಾಶ ನೀಡುವ ಮತ್ತು ನಿರ್ಮಾಪಕರ ಹಿತ ಕಾಯುವ ಅಕ್ಷಯ್ ಗುಣವನ್ನು ಕರಣ್ ಜೋಹರ್ ಕೊಂಡಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಕ್ಷಯ್, “ನಾನು ದಿನಕ್ಕೆ ಕೇವಲ 8 ಗಂಟೆ ಮಾತ್ರ ಕೆಲಸ ಮಾಡುತ್ತೇನೆ ಎಂಬ ಕಾರಣಕ್ಕೆ ಅನೇಕ ದೊಡ್ಡ ನಿರ್ಮಾಪಕರು ನನ್ನನ್ನು ಸಿನಿಮಾಗಳಿಗೆ ಹಾಕಿಕೊಳ್ಳಲು ಹಿಂದೇಟು ಹಾಕುತ್ತಾರೆ. ಆದರೆ, ಆ 8 ಗಂಟೆಗಳ ಕಾಲ ನಾನು ವಿಶ್ರಾಂತಿಗಾಗಿ ನನ್ನ ವ್ಯಾನಿಟಿ ವ್ಯಾನ್‌ಗೂ ಹೋಗುವುದಿಲ್ಲ ಎಂಬುದನ್ನು ಅವರು ಮರೆತುಬಿಡುತ್ತಾರೆ” ಎಂದು ಬೇಸರ ವ್ಯಕ್ತಪಡಿಸಿದರು. ತೆರೆಯ ಮೇಲೆ ಪ್ರೇಕ್ಷಕರು ನಟರನ್ನು ಲವಲವಿಕೆಯಿಂದ ನೋಡಲು ಬಯಸುತ್ತಾರೆಯೇ ಹೊರತು ಸುಸ್ತಾದ ಮುಖವನ್ನಲ್ಲ. ಹೀಗಾಗಿ 8 ಗಂಟೆ ಕೆಲಸ, 8 ಗಂಟೆ ನಿದ್ದೆ, 2 ಗಂಟೆ ವ್ಯಾಯಾಮ ಮತ್ತು ಉಳಿದ ಸಮಯವನ್ನು ಕುಟುಂಬಕ್ಕೆ ಮೀಸಲಿಡುವುದಾಗಿ ಅವರು ಸ್ಪಷ್ಟಪಡಿಸಿದರು.

ಅಕ್ಷಯ್ ಕುಮಾರ್ ಅವರ ವೇಗದ ಕೆಲಸವನ್ನು ನಟ ರವಿ ಕಿಶನ್ ಮುಕ್ತಕಂಠದಿಂದ ಶ್ಲಾಘಿಸಿದರು. ಅಕ್ಷಯ್ ಕೇವಲ 55 ದಿನಗಳಲ್ಲಿ ಒಂದು ಸಿನಿಮಾವನ್ನು ಪೂರ್ಣಗೊಳಿಸುತ್ತಾರೆ. ಇದರಿಂದ ನಿರ್ಮಾಪಕರಿಗೆ ಕೋಟ್ಯಂತರ ರೂಪಾಯಿ ಹಣ ಉಳಿತಾಯವಾಗುವುದಲ್ಲದೆ, ಚಿತ್ರತಂಡದಲ್ಲಿರುವ 300 ರಿಂದ 400 ಕಾರ್ಮಿಕರಿಗೆ ನಿರಂತರವಾಗಿ ಉದ್ಯೋಗ ಸಿಗುತ್ತದೆ ಎಂದು ರವಿ ಕಿಶನ್ ಮೆಚ್ಚುಗೆ ವ್ಯಕ್ತಪಡಿಸಿದರು.

ಕಡಿಮೆ ದಿನಗಳಲ್ಲಿ ಸಿನಿಮಾ ಮುಗಿಸುವ ಬಗ್ಗೆ ಕೇಳಲಾಗುವ ಪ್ರಶ್ನೆಗಳಿಗೆ ಅಕ್ಷಯ್ ಹಾಲಿವುಡ್ ಉದಾಹರಣೆ ನೀಡಿದರು. “ಖ್ಯಾತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಕೂಡ ಒಂದು ಸಿನಿಮಾ ಪೂರ್ಣಗೊಳಿಸಲು 90 ದಿನಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಇನ್ನು ನಟ ಟಾಮ್ ಕ್ರೂಸ್ ‘ಮಿಷನ್: ಇಂಪಾಸಿಬಲ್’ ಚಿತ್ರವನ್ನು ಕೇವಲ 55 ದಿನಗಳಲ್ಲಿ ಮುಗಿಸಿದ್ದರು” ಎನ್ನುವ ಮೂಲಕ ತಮ್ಮ ಕೆಲಸದ ವೇಗವನ್ನು ಸಮರ್ಥಿಸಿಕೊಂಡರು.

Must Read