November 26, 2026
Thursday, November 26, 2026
spot_img

ನೇಪಾಳ ಪ್ರವಾಹ : ನಾಪತ್ತೆಯಾಗಿರುವ 213 ಭಾರತೀಯರು ಮೃತರೆಂದು ಘೋಷಿಸುವ ಪ್ರಕ್ರಿಯೆ ಆರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆಗಸ್ಟ್‌ನಲ್ಲಿ ತ್ರಿಶೂಲಿ-ಭೋಟೆ ಕೋಶಿ ನದಿ ಪ್ರದೇಶದಲ್ಲಿ ಉಂಟಾದ ಭೀಕರ ಪ್ರವಾಹದಲ್ಲಿ 213 ನಾಪತ್ತೆಯಾಗಿದ್ದು, ಇವರನ್ನು ಮೃತರು ಎಂದು ಘೋಷಿಸಲು ನೇಪಾಳ ಸರ್ಕಾರ ನಿರ್ಧರಿಸಿದೆ.

ನೇಪಾಳದಲ್ಲಿರುವ ಭಾರತೀಯ ರಾಯಭಾರ ಕಚೇರಿ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದು, ನಾಪತ್ತೆಯಾಗಿರುವ 213 ಭಾರತೀಯರು ಮೃತಪಟ್ಟಿದ್ದಾರೆಂದು ಪರಿಗಣಿಸಿ, ಅಧಿಕೃತ ಮರಣ ಘೋಷಣೆ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಹೇಳಿದೆ. ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ ನಾಪತ್ತೆಯಾಗಿರುವ 213 ಭಾರತೀಯರ ಪಟ್ಟಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಪಟ್ಟಿಯಲ್ಲಿರುವ ವಿವರಗಳಿಗೆ ಸೇರ್ಪಡೆಗಳು, ತೆಗೆದುಹಾಕುವಿಕೆಗಳು ಅಥವಾ ತಿದ್ದುಪಡಿಗಳನ್ನು ಮಾಡುವ ಕುರಿತು ಎನ್‌ಡಿಆರ್‌ಆರ್‌ಎಂಎ ಆಕ್ಷೇಪಣೆಗಳನ್ನು ಆಹ್ವಾನಿಸಿದೆ. ಕಾಣೆಯಾದ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ಈ ಪಟ್ಟಿಯ ಕುರಿತು ಯಾವುದೇ ಆತಂಕಗಳು, ಆಕ್ಷೇಪಣೆಗಳು ಅಥವಾ ಬದಲಾವಣೆಗಳ ಪ್ರಸ್ತಾವನೆಗಳಿದ್ದರೆ, ಅವರು ಡಿಸೆಂಬರ್ 2 ರ ಮೊದಲು ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

ಸಂಬಂಧಪಟ್ಟ ಕುಟುಂಬ ಸದಸ್ಯರು [email protected] ಎಂಬ ಇಮೇಲ್ ವಿಳಾಸದ ಮೂಲಕ ಅಥವಾ +9779851316807 ಎಂಬ ಮೊಬೈಲ್ ಸಂಖ್ಯೆಯ ಮೂಲಕ ರಾಯಭಾರ ಕಚೇರಿಯನ್ನು ಸಂಪರ್ಕಿಸಬಹುದೆಂದು ರಾಯಭಾರ ಕಚೇರಿ ತಿಳಿಸಿದೆ. ನಂತರ ನೇಪಾಳದಲ್ಲಿನ ಸ್ಥಳೀಯ ಅಧಿಕಾರಿಗಳಿಂದ ಈ ವ್ಯಕ್ತಿಗಳ ಮರಣ ಪ್ರಮಾಣಪತ್ರಗಳನ್ನು ಪಡೆಯುವ ಪ್ರಕ್ರಿಯೆಯನ್ನು ಭಾರತೀಯ ರಾಯಭಾರ ಕಚೇರಿ ಆರಂಭಿಸಲಿದೆ.

ಆಗಸ್ಟ್ 26ರಂದು ಹಿಮಾಲಯದ ತಪ್ಪಲಿನ ಮೌಂಟ್ ಲಾಂಗ್‌ಟಾಂಗ್ ಲಿರುಂಗ್‌ನಲ್ಲಿ ಹಿಮ ಬಂಡೆ ಕುಸಿತದಿಂದ ಉಂಟಾದ ಭೀಕರ ಪ್ರವಾಹದಲ್ಲಿ ಕನಿಷ್ಠ 1,453 ಜನರು ಮೃತಪಟ್ಟಿದ್ದು, 5,000ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಎನ್​ಡಿಆರ್​ಎಂಎ ತಿಳಿಸಿದೆ. ಹಿಮಾಲಯದ ಗಡಿ ಪ್ರದೇಶದಿಂದ ದಕ್ಷಿಣದ ಕಡೆಗೆ ಹರಿಯುವ ಭೋಟೆಕೋಶಿ ನದಿಯಲ್ಲಿ ಉಂಟಾದ ಪ್ರವಾಹವು ಅಪಾರ ಪ್ರಮಾಣದ ನೀರನ್ನು ಕೆಳಭಾಗಕ್ಕೆ ಹರಿಸಿದೆ. ಈ ಪ್ರವಾಹದ ರಭಸಕ್ಕೆ ಮನೆಗಳು, ವಾಹನಗಳು, ರಸ್ತೆಗಳು ಮತ್ತು ಸೇತುವೆಗಳು ಕೊಚ್ಚಿಹೋಗಿವೆ. ಜಲವಿದ್ಯುತ್ ಯೋಜನೆಗಳಿಗೂ ಹಾನಿಯಾಗಿದೆ.

Must Read