ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಲಬುರಗಿ ನಗರದ ಕುಷ್ಟರೋಗಿಗಳ ಕಾಲೋನಿಯಲ್ಲಿ ವ್ಯಕ್ತಿಯೊಬ್ಬರನ್ನು ಬೆತ್ತಲೆ ಮಾಡಿ ಕಟ್ಟಿಗೆಯಿಂದ ಹೊಡೆದು ಹತ್ಯೆ ಮಾಡಿದ ಘಟನೆ ನಡೆದಿದೆ. ಈ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದ್ದು, ಚಾಂದ್‌ಸಾಬ್ ಎಂಬುವರು ಕೊಲೆಯಾದ ದುರ್ದೈವಿ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಚಾಂದ್‌ಸಾಬ್ ತಮ್ಮ ಮನೆಯಲ್ಲಿ ಪರಿಚಿತರೊಂದಿಗೆ ಎಣ್ಣೆಪಾರ್ಟಿ ನಡೆಸುತ್ತಿದ್ದಾಗ ಮಾತಿನ ಚಕಮಕಿ ಗಲಾಟೆಗೆ ತಿರುಗಿದೆ. ಅದೇ ವೇಳೆ ಆರೋಪಿಗಳು ಅವರನ್ನು ಬೆತ್ತಲೆ ಮಾಡಿ ಕಟ್ಟಿಗೆಯಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಮೃತರ ಪತ್ನಿ ಪ್ರಸ್ತುತ ದೆಹಲಿಯಲ್ಲಿ ವಾಸವಾಗಿದ್ದು, ಪತಿಯ ಸಾವಿನ ಸುದ್ದಿ ತಿಳಿದು ಕಲಬುರಗಿಯತ್ತ ಪ್ರಯಾಣ ಬೆಳೆಸಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದ ತಕ್ಷಣ, ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.