Sunday, September 21, 2025

ಲೈಂಗಿಕ ಕಿರುಕುಳ ಆರೋಪ: ದೇವಾಲಯದಲ್ಲಿ ನೇಣು ಬಿಗಿದು ಅರ್ಚಕ ಆತ್ಮಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈನ ಕಾಂಡಿವಲಿ ಪ್ರದೇಶದಲ್ಲಿ ದೇವಾಲಯದ ಅರ್ಚಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 52 ವರ್ಷದ ಈ ಅರ್ಚಕರು ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾರೆ ಎಂದು 19 ವರ್ಷದ ಯುವತಿಯೊಬ್ಬರು ಆರೋಪಮಾಡಿದ್ದರು. ಇದಾದ ಕೆಲವೇ ಗಂಟೆಗಳ ನಂತರ ಈ ದುರಂತ ಸಂಭವಿಸಿದೆ.

ಪೊಲೀಸರ ಮಾಹಿತಿಯ ಪ್ರಕಾರ, 19 ವರ್ಷದ ಯುವತಿ ಮತ್ತು ಆಕೆಯ ತಂದೆ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಕಾಂಡಿವಲಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಅವರ ಹೇಳಿಕೆಯ ಪ್ರಕಾರ, ಶುಕ್ರವಾರ ರಾತ್ರಿ 10.30ಕ್ಕೆ ಅರ್ಚಕರು ಕರೆ ಮಾಡಿ ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದಾರೆಂದು ಆರೋಪಿಸಲಾಗಿದೆ. ದೂರು ದಾಖಲಿಸಲು ಬೆಳಗ್ಗೆ ಬರುವಂತೆ ಪೊಲೀಸರ ಸೂಚನೆ ನಂತರ ಅವರು ವಾಪಾಸಾದರು.

ಈ ಘಟನೆ ನಂತರ ಪೊಲೀಸರು ಅರ್ಚಕರನ್ನು ಹುಡುಕಲು ಆರಂಭಿಸಿದರೂ ಪತ್ತೆಯಾಗಲಿಲ್ಲ. ಅಂತಿಮವಾಗಿ, ದೇವಾಲಯದೊಳಗೆ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅರ್ಚಕರ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕವಾಗಿ ಆಕಸ್ಮಿಕ ಸಾವಿನ ವರದಿ (ಎಡಿಆರ್) ದಾಖಲಿಸಲಾಗಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ