ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಡಹಬ್ಬ ದಸರಾ ಉದ್ಘಾಟಿಸಲಿರುವ ಬಾನು ಮುಷ್ತಾಕ್ ಅವರು ಖಾಸಗಿ ಹೋಟೆಲಿನಲ್ಲಿ ವಾಸ್ತವ್ಯ ಹೊಂದಿದ್ದು ಸರ್ಕಾರ ಬಿಗಿ ಭದ್ರತೆ ನೀಡಿದೆ.
ಸ್ಥಳದಲ್ಲಿ 3 ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಿದ್ದು, ಬೆಳಗ್ಗೆ 9:30ಕ್ಕೆ ಹೋಟೆಲಿನಿಂದ ಬಾನು ಮುಷ್ತಾಕ್ ಪೊಲೀಸ್ ಎಸ್ಕಾರ್ಟ್ ಮೂಲಕ ಚಾಮುಂಡಿ ಬೆಟ್ಟಕ್ಕೆ ತೆರಳಲಿದ್ದಾರೆ.
ಬಾನು ಮುಷ್ತಾಕ್ ಆಯ್ಕೆ ಮಾಡಿದ್ದಕ್ಕೆ ಹಿಂದೂ ಸಂಘಟನೆಗಳು, ಬಿಜೆಪಿ ನಾಯಕರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಪೊಲೀಸರಿಂದ ಭಾರೀ ಭದ್ರತೆ ನೀಡಲಾಗಿದೆ.
ಉದ್ಘಾಟಕರ ಸ್ವಾಗತಕ್ಕೆ ಚಾಮುಂಡಿ ಬೆಟ್ಟ ಸಿದ್ಧವಾಗಿದ್ದು ಮಹಿಷಾಸುರ ಮೂರ್ತಿಯಿಂದ ದೇವಾಲಯದವರೆಗೆ ಸಾಂಪ್ರಾದಾಯಿಕ ಸ್ವಾಗತ ನೀಡಲಾಗುತ್ತದೆ. ರಸ್ತೆ ಉದ್ದಕ್ಕೂ ರಂಗೋಲಿ ಬಿಡಿಸಿ, ಬಾಳೆ ಕಂಬ ಕಟ್ಟಿ ಸ್ವಾಗತಿಸಲು ತಯಾರಿ ನಡೆದಿದೆ. ಮೂರು ಕಡೆ ಚೆಕ್ಕಿಂಗ್ ಪಾಯಿಂಟ್ ಇದ್ದು ಆಗಮಿಸುವ ಪ್ರತಿಯೊಬ್ಬರನ್ನು ಪರಿಶೀಲಿಸಿದ ಬಳಿಕವಷ್ಟೇ ಬೆಟ್ಟಕ್ಕೆ ಪ್ರವೇಶ ಕಲ್ಪಿಸಲಾಗುತ್ತದೆ.
ಉದ್ಘಾಟನೆಗೂ ಮುನ್ನ ಸಿಎಂ ಸಿದ್ದರಾಮಯ್ಯ, ಉದ್ಘಾಟಕರಾದ ಬಾನು ಮುಸ್ತಾಕ್ ಸೇರಿದಂತೆ ಗಣ್ಯರಿಗೆ ಮಹಿಷಾ ಮೂರ್ತಿ ಬಳಿ ಜಿಲ್ಲಾಡಳಿತ ಸ್ವಾಗತ ನೀಡಲಿದೆ. ಅಲ್ಲಿಂದ ಅಲ್ಲಿಂದ ತೆರೆದ ವಾಹನ ಅಥವಾ ಕಾಲ್ನಡಿಗೆ ಮೂಲಕ ಚಾಮುಂಡೇಶ್ವರಿ ದೇವಾಸ್ಥಾನಕ್ಕೆ ಗಣ್ಯರು ತೆರಳಲಿದ್ದಾರೆ. ದೇವರ ದರುಶನದ ಬಳಿಕ ವೇದಿಕೆ ಕಾರ್ಯಕ್ರಮ ನಡೆಯಲಿದೆ.