October 18, 2026
Sunday, October 18, 2026
spot_img

ಅಸ್ಸಾಂನಲ್ಲಿ ಕಾಂಗ್ರೆಸ್ ಗೆ ಶಾಕ್ ಕೊಟ್ಟ ಭೂಪೇನ್ ಬೋರಾ: ಬಿಜೆಪಿಯತ್ತ ಮುಖ ಮಾಡಿದ ಮಾಜಿ ರಾಜ್ಯಾಧ್ಯಕ್ಷ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಸ್ಸಾಂ ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ ಗೆ ದೊಡ್ಡ ಹೊಡೆತ ಎದುರಾಗಿದ್ದು, ಅಸ್ಸಾಂ ಮಾಜಿ ಕಾಂಗ್ರೆಸ್ ಅಧ್ಯಕ್ಷ ಭೂಪೇನ್ ಬೋರಾ ಬಿಜೆಪಿ ಪಕ್ಷ ಸೇರಿಕೊಳ್ಳುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಎರಡು ದಿನದ ಹಿಂದೆ ಭೂಪೆನ್ ಕುಮಾರ್ ಬೋರಾ ಅಸ್ಸಾಂ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ರವಾನಿಸಿದ್ದರು. ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಅಸ್ಸಾಂ ಕಾಂಗ್ರೆಸ್ ನಾಯಕರು ಭೂಪೆನ್ ಕುಮಾರ್ ಬೋರಾ ಭೇಟಿಯಾಗಿ ಮನ ಒಲಿಸಿದ್ದರು. ಹೀಗಾಗಿ ರಾಜೀನಾಮೆ ಪತ್ರ ಹಿಂಪಡೆದಿದ್ದರು. ಜೊತೆಗೆ ಮುಂದಿನ ನಿರ್ಧಾರ ಮರುಪರಿಶೀಲಿಸುವುದಾಗಿ ಹೇಳಿದ್ದರು. ಈ ಮೂಲಕ ಅಡ್ಡ ಗೋಡೆಯ ಮೇಲೆ ದೀಪ ಇಟ್ಟು ಬಂದಿದ್ದರು.

ಇದೀಗ ಭೂಪೇನ್ ಬೋರಾ ಸಿಎಂ ಹಿಮಂತ ಶರ್ಮಾ ಅವರನ್ನು ಭೇಟಿಯಾಗಿದ್ದು, ಫೆಬ್ರವರಿ 22ರಂದು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಶರ್ಮಾ ಹೇಳಿದ್ದಾರೆ.

ನಮ್ಮ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ಈಗಾಗಲೇ ಭೂಪೇನ್ ಬೋರಾ ಅವರ ಸೇರ್ಪಡೆಯನ್ನು ಅನುಮೋದಿಸಿದ್ದಾರೆ. ನಮ್ಮ ಪಕ್ಷದಲ್ಲಿ ಭೂಪೇನ್ ಬೋರಾ ಅವರಿಗೆ ಎಲ್ಲಾ ಗೌರವ ಮತ್ತು ಘನತೆಯನ್ನು ನೀಡಲಾಗುವುದು. ಭೂಪೇನ್ ಬೋರಾ ಕಾಂಗ್ರೆಸ್‌ನಲ್ಲಿ ದೀರ್ಘಕಾಲದಿಂದ ಕಷ್ಟಪಟ್ಟಿದ್ದಾರೆ. ಈಗ ಅವರು ಬಯಸಿದ್ದನ್ನು ಮಾಡಲು ಬಿಜೆಪಿಯಲ್ಲಿ ಅವರಿಗೆ ವೇದಿಕೆ ಸಿಗಲಿದೆ ಎಂದು ಸಿಎಂ ಹಿಮಂತ ಶರ್ಮಾ ಹೇಳಿದ್ದಾರೆ.

Must Read