ಜೀವನದಲ್ಲಿ ಪ್ರತಿಯೊಬ್ಬರೂ ಆರೋಗ್ಯದಿಂದ, ಸಂತೋಷದಿಂದ ಹೆಚ್ಚು ವರ್ಷ ಬದುಕಬೇಕೆಂಬ ಆಸೆ ಇರುತ್ತದೆ. ಆದರೆ ಅದಕ್ಕಾಗಿ ಕೇವಲ ಆಸೆ ಸಾಕಾಗದು, ಸರಿಯಾದ ಜೀವನಶೈಲಿ ಮತ್ತು ಶಿಸ್ತಿನ ಅಭ್ಯಾಸಗಳು ಅಗತ್ಯ. ಇತ್ತೀಚೆಗೆ ಪ್ರಕಟವಾದ ವೈಜ್ಞಾನಿಕ ಅಧ್ಯಯನಗಳು ತೋರಿಸಿರುವಂತೆ, ಸರಳವಾದ ಕೆಲವು ಜೀವನಶೈಲಿ ಬದಲಾವಣೆಗಳು ನಮ್ಮ ಆರೋಗ್ಯವನ್ನು ಕಾಪಾಡಿ, ದೀರ್ಘಾಯುಷ್ಯವನ್ನು ಪಡೆಯಲು ನೆರವಾಗುತ್ತವೆ. ಈ ಅಭ್ಯಾಸಗಳು ಕೇವಲ ದೇಹವನ್ನೇ ಅಲ್ಲ, ಮನಸ್ಸಿನ ಶಾಂತಿಯನ್ನೂ ಕಾಪಾಡುತ್ತವೆ. ಈಗ ಅಂತಹ ನಾಲ್ಕು ಪ್ರಮುಖ ಅಭ್ಯಾಸಗಳ ಬಗ್ಗೆ ತಿಳಿಯೋಣ.
ಆಹಾರ ಮತ್ತು ಪೋಷಣೆ
ನಮ್ಮ ದಿನನಿತ್ಯದ ಆಹಾರವೇ ನಮ್ಮ ಆರೋಗ್ಯದ ಮೂಲ. ಪೋಷಕಾಂಶಗಳಿರುವ ಧಾನ್ಯಗಳು, ಹಣ್ಣು-ತರಕಾರಿಗಳು, ಹಾಲು ಉತ್ಪನ್ನಗಳು ಹಾಗೂ ಮೆಡಿಟರೇನಿಯನ್ ಮಾದರಿಯ ಆಹಾರ ಪದ್ಧತಿಯನ್ನು ಅನುಸರಿಸುವುದು ಆರೋಗ್ಯಕ್ಕೆ ಅನುಕೂಲಕರ. ಜೊತೆಗೆ ಉಪ್ಪಿನ ಸೇವನೆಯನ್ನು ನಿಯಂತ್ರಿಸುವುದು, ಧೂಮಪಾನ ಹಾಗೂ ತಂಬಾಕು ಉತ್ಪನ್ನಗಳಿಂದ ದೂರವಿರುವುದು ದೀರ್ಘಾಯುಷ್ಯಕ್ಕೆ ಸಹಾಯಕ.

ತೃಪ್ತಿಕರ ನಿದ್ರೆ
ನಿದ್ರೆಯ ಕೊರತೆಯು ದೇಹದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಕನಿಷ್ಠ 8 ಗಂಟೆಗಳ ಗುಣಮಟ್ಟದ ನಿದ್ರೆ ಪಡೆಯುವವರು ಹೆಚ್ಚು ಆರೋಗ್ಯಕರ ಜೀವನ ನಡೆಸುತ್ತಾರೆ ಎಂದು ಅಧ್ಯಯನಗಳು ದೃಢಪಡಿಸಿವೆ. ಉತ್ತಮ ನಿದ್ರೆ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಕಡಿಮೆ ಔಷಧ ಸೇವನೆ
ವೈದ್ಯರ ಸಲಹೆ ಇಲ್ಲದೇ ಹೆಚ್ಚು ಔಷಧಗಳನ್ನು ಸೇವಿಸುವುದರಿಂದ ದೇಹದ ಮೇಲೆ ಹಾನಿಕರ ಪರಿಣಾಮ ಉಂಟಾಗಬಹುದು. ಅನಗತ್ಯ ಔಷಧ ಬಳಕೆ ತಪ್ಪಿಸಿ, ನೈಸರ್ಗಿಕ ಜೀವನ ಶೈಲಿಗೆ ಒತ್ತು ನೀಡುವುದು ಉತ್ತಮ. ಇದು ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಜೀವನ ಪರಿಸ್ಥಿತಿಗಳು
ಗ್ರಾಮೀಣ ಜೀವನ ಶೈಲಿ, ತಾಜಾ ವಾಯು, ಪ್ರಕೃತಿ ಸೌಂದರ್ಯ ಹಾಗೂ ಕಡಿಮೆ ಒತ್ತಡವು ದೀರ್ಘಾಯುಷ್ಯಕ್ಕೆ ಸಹಕಾರಿ. ಅಧ್ಯಯನಗಳ ಪ್ರಕಾರ ಹೆಚ್ಚು ಶತಾಯುಷಿಗಳು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಾರೆ. ಜೊತೆಗೆ ದಯೆ, ಔದಾರ್ಯ ಮತ್ತು ಪರೋಪಕಾರಿ ಜೀವನವು ಮಾನಸಿಕ ಶಾಂತಿಯನ್ನು ತಂದುಕೊಂಡು ಬರುತ್ತದೆ.(Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)