Tuesday, September 23, 2025

Navratri | ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ದೇವಿಯ ಆರಾಧನೆ

ಶರನ್ನವರಾತ್ರಿಯ ಎರಡನೇ ದಿನ ಸೆಪ್ಟೆಂಬರ್ 23ರಂದು ಮಂಗಳವಾರ ಬಂದಿದೆ. ಈ ದಿನ ದುರ್ಗಾ ದೇವಿಯ ಎರಡನೇ ರೂಪವಾದ ಬ್ರಹ್ಮಚಾರಿಣಿ ದೇವಿಯನ್ನು ಭಕ್ತಿಪೂರ್ವಕವಾಗಿ ಆರಾಧಿಸಲಾಗುತ್ತದೆ. ಜ್ಞಾನ ಮತ್ತು ತಪಸ್ಸಿನ ಸಂಕೇತವಾದ ಈ ರೂಪವು ಭಕ್ತರಲ್ಲಿ ಶಕ್ತಿ, ಧೈರ್ಯ ಮತ್ತು ಭಕ್ತಿಯನ್ನು ಬೆಳೆಸುತ್ತದೆ ಎಂದು ನಂಬಿಕೆ. ಬಿಳಿ ಸೀರೆಯನ್ನು ಧರಿಸಿ, ಬಲಗೈಯಲ್ಲಿ ಜಪಮಾಲೆ ಮತ್ತು ಎಡಗೈಯಲ್ಲಿ ಕಮಂಡಲವನ್ನು ಹಿಡಿದಿರುವ ದೇವಿಯು, ಸರಳತೆ ಮತ್ತು ತಪಸ್ಸಿನ ಜೀವನವನ್ನು ಪ್ರತಿನಿಧಿಸುತ್ತಾಳೆ.

ಬ್ರಹ್ಮಚಾರಿಣಿ ದೇವಿಗೆ ನೈವೇದ್ಯ
ಈ ದಿನ ಭಕ್ತರು ದೇವಿಗೆ ಬರ್ಫಿ, ಸಕ್ಕರೆ, ಪಾಯಸ ಮತ್ತು ಪಂಚಾಮೃತವನ್ನು ಅರ್ಪಿಸುತ್ತಾರೆ. ದೇವಿಯ ಪ್ರೀತಿಪಾತ್ರವಾದ ಕೆಂಪು ಬಣ್ಣದ ಬಟ್ಟೆಯನ್ನು ಧರಿಸುವುದು ಮತ್ತು ಬಿಳಿ ಹೂವುಗಳನ್ನು ಅರ್ಪಿಸುವುದು ಶುಭಕರವೆಂದು ಪರಿಗಣಿಸಲಾಗಿದೆ.

ಪೂಜೆಯ ಮಹತ್ವ

ಬ್ರಹ್ಮಚಾರಿಣಿ ದೇವಿಯನ್ನು ಆರಾಧಿಸುವುದರಿಂದ ಜ್ಞಾನ, ಶಾಂತಿ ಮತ್ತು ತಪಸ್ಸಿನ ಶಕ್ತಿ ದೊರೆಯುತ್ತದೆ. ಆಕೆಯ ಪೂಜೆಯಿಂದ ಮಂಗಳ ದೋಷ ಕಡಿಮೆಯಾಗುತ್ತದೆ. ಶಿವನ ಆಶೀರ್ವಾದವನ್ನು ಪಡೆಯುವ ಜೊತೆಗೆ ಅಹಂಕಾರ, ಅಸೂಯೆ ಮತ್ತು ಸೋಮಾರಿತನ ನಂತಹ ದುರ್ಗುಣಗಳು ದೂರವಾಗುತ್ತವೆ. ಶಕ್ತಿಯ ಜೊತೆಗೆ ಭಕ್ತಿ ಮತ್ತು ಬುದ್ಧಿವಂತಿಕೆ ಹೆಚ್ಚುತ್ತದೆ.

ಬ್ರಹ್ಮಚಾರಿಣಿ ದೇವಿಯ ಕಥೆ
ಹಿಂದು ಧರ್ಮಗ್ರಂಥಗಳ ಪ್ರಕಾರ, ಬ್ರಹ್ಮಚಾರಿಣಿ ದೇವಿಯು ಹಿಮಾಲಯ ರಾಜನ ಮಗಳಾಗಿ ಜನಿಸಿದಳು. ಶಿವನನ್ನು ವರಿಸಲು ತಪಸ್ಸು ಮಾಡಿ ಸಾವಿರಾರು ವರ್ಷ ಹಣ್ಣು, ಹೂವು, ಗಿಡಮೂಲಿಕೆ, ಬಿಲ್ವಪತ್ರೆಯ ಎಲೆಗಳನ್ನು ಸೇವಿಸಿ ಬದುಕಿದಳು. ಕೊನೆಯಲ್ಲಿ ನೀರನ್ನೂ ಬಿಟ್ಟು ತಪಸ್ಸು ಮುಂದುವರಿಸಿದಳು. ಆಕೆಯ ಭಕ್ತಿ ನೋಡಿ ಶಿವನು ತೃಪ್ತನಾಗಿ ಪಾರ್ವತಿಯನ್ನು ವಿವಾಹವಾದನು.

ಪೂಜೆಯ ವಿಧಾನ
ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ಶುದ್ಧರಾಗಿ ದುರ್ಗಾ ದೇವಿಯ ಮುಂದೆ ತುಪ್ಪದ ದೀಪ ಹಚ್ಚಬೇಕು. ಬಿಳಿ ಹೂವುಗಳು, ದಾಸವಾಳ ಹೂವು, ಕುಂಕುಮ ಮತ್ತು ಸಿಹಿತಿಂಡಿಗಳನ್ನು ಅರ್ಪಿಸಿ, ದುರ್ಗಾ ಸಪ್ತಶತಿ ಪಠಿಸಿ, ದುರ್ಗಾ ಮಂತ್ರಗಳನ್ನು ಜಪಿಸಿ. ಸಂಜೆ ಆರತಿ ಮಾಡಿ ಉಪವಾಸ ಕೊನೆಗೊಳಿಸಿ.

ನವರಾತ್ರಿ ಎರಡನೇ ದಿನ ಬ್ರಹ್ಮಚಾರಿಣಿ ದೇವಿಯ ಪೂಜೆಯಿಂದ ಭಕ್ತರು ಶಾಂತಿ, ಧೈರ್ಯ ಮತ್ತು ಭಕ್ತಿಯನ್ನೂ ಪಡೆಯುತ್ತಾರೆ. ದುರ್ಗುಣಗಳನ್ನು ದೂರ ಮಾಡಿ ಜೀವನದಲ್ಲಿ ಸಕಾರಾತ್ಮಕತೆ ಬೆಳೆಯಲು ಈ ಪೂಜೆ ಮಹತ್ವಪೂರ್ಣ. ಹೀಗಾಗಿ ನವರಾತ್ರಿಯ ಈ ದಿನವನ್ನು ಶ್ರದ್ಧೆಯಿಂದ ಆಚರಿಸುವುದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.

ಇದನ್ನೂ ಓದಿ