ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಜಾಮಿಯಾ ನಗರದಲ್ಲಿರುವ ಕ್ವೀನ್ ಅಪಾರ್ಟ್‌ಮೆಂಟ್‌ನಲ್ಲಿ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ. ಅಪಾರ್ಟ್‌ಮೆಂಟ್‌ನಲ್ಲಿ 65 ವರ್ಷದ ಮಹಿಳೆ ಅಫ್ತಾಬ್ ಜೆಹಾನ್ ಅವರ ಕೊಳೆತ ಶವ ಪತ್ತೆಯಾಗಿದ್ದು, 70 ವರ್ಷದ ಪತಿ ಸಿರಾಜ್ ಖಾನ್ ತೀವ್ರ ಅಸ್ವಸ್ಥರಾಗಿದ್ದರು. ಪ್ರಾಥಮಿಕ ತನಿಖೆಯಲ್ಲಿ, ಮಹಿಳೆಯ ಸಾವು ನೈಸರ್ಗಿಕ ಕಾರಣಗಳಿಂದ ಸಂಭವಿಸಿರಬಹುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೃತ ದಂಪತಿಗಳು ಜಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ನಿವೃತ್ತ ಸಂಗೀತ ಶಿಕ್ಷಕರಾಗಿದ್ದರು. ಅವರ 50 ವರ್ಷದ ಮಗ ಇಮ್ರಾನ್ (ಆಲಿಯಾಸ್ ಶಾಲಿ) ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಆತನೇ ತಂದೆ-ತಾಯಿಯನ್ನು ಮನೆಯ ಕೋಣೆಯಲ್ಲಿ ಕೆಲವು ದಿನಗಳಿಂದ ಬಂಧಿಸಿದ್ದಾನೆ ಎನ್ನಲಾಗಿದೆ.
ಹಾಂಗ್ ಕಾಂಗ್‌ನಲ್ಲಿ ವಾಸಿಸುತ್ತಿರುವ ವೃದ್ಧ ದಂಪತಿಯ ಮಗಳು, ಹಲವು ದಿನಗಳಿಂದ ಹೆತ್ತವರನ್ನು ಸಂಪರ್ಕಿಸಲು ಸಾಧ್ಯವಾಗದ ಕಾರಣ ಆತಂಕಗೊಂಡು, ತನ್ನ ಸಂಬಂಧಿ ಅಹ್ಮದ್ ಖಾನ್ ಎಂಬುವವರಿಗೆ ಮಾಹಿತಿ ನೀಡಿದ್ದಳು. ಅಹ್ಮದ್ ಖಾನ್ ಅವರು ದೆಹಲಿಯಲ್ಲಿರುವ ಇತರ ಕುಟುಂಬ ಸದಸ್ಯರನ್ನು ಸಂಪರ್ಕಿಸಿ, ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡುವಂತೆ ಕೇಳಿದರು. ಆದರೆ, ಬಾಗಿಲು ತೆರೆಯಲು ಮಗ ಇಮ್ರಾನ್ ನಿರಾಕರಿಸಿದನು. ಇದರಿಂದ ಕುಟುಂಬ ಸದಸ್ಯರು ಭಯಭೀತರಾಗಿ ಪೊಲೀಸರನ್ನು ಕರೆತಂದರು.
ಜಾಮಿಯಾ ನಗರ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಾಗಿಲನ್ನು ಒಡೆದು ಒಳಗೆ ಪ್ರವೇಶಿಸಿದಾಗ, ಮಹಿಳೆಯ ಕೊಳೆತ ಶವವನ್ನು ಕಂಡು, ಗಂಭೀರ ಸ್ಥಿತಿಯಲ್ಲಿದ್ದ ತಂದೆಯನ್ನು ತಕ್ಷಣವೇ ಏಮ್ಸ್ ಟ್ರಾಮಾ ಸೆಂಟರ್‌ಗೆ ದಾಖಲಿಸಿದರು. ಮಗ ಇಮ್ರಾನ್ ವಿಚಾರಣೆ ವೇಳೆ ಗೊಂದಲಮಯ ಉತ್ತರಗಳನ್ನು ನೀಡಿದ್ದಾನೆ ಮತ್ತು ನಾಲ್ಕೈದು ದಿನಗಳಿಂದ ಯಾವುದೇ ಆಹಾರವಿಲ್ಲದೆ ತಮ್ಮ ತಂದೆ-ತಾಯಿಯನ್ನು ಬಂಧಿಸಿ ಇಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಇಮ್ರಾನ್ ಅವರನ್ನು ಮಾನಸಿಕ ಖಿನ್ನತೆ ಇದ್ದು ಪರಿಹಾರಕ್ಕಾಗಿ ಐಎಚ್‌ಬಿಎಎಸ್‌ನಲ್ಲಿ ದಾಖಲಿಸಿ, ನಂತರ ಜಿಟಿಬಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.