ಭಾರತೀಯ ಸಂಸ್ಕೃತಿಯಲ್ಲಿ ತುಳಸಿ ಗಿಡಕ್ಕೆ ವಿಶೇಷ ಸ್ಥಾನವಿದೆ. ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲ್ಪಡುವ ತುಳಸಿಯನ್ನು ಮನೆ ಮುಂದೆ ನೆಡುವುದರಿಂದ ಸಕಾರಾತ್ಮಕ ಶಕ್ತಿ ಮನೆ ಪ್ರವೇಶಿಸುತ್ತದೆ ಎನ್ನುವ ನಂಬಿಕೆ ಇದೆ. ಬೆಳಿಗ್ಗೆ ತುಳಸಿಗೆ ನೀರು ಹಾಕುವುದು, ಸಂಜೆ ದೀಪ ಹಚ್ಚುವುದು ಲಕ್ಷ್ಮಿ ಪ್ರಸನ್ನಳಾಗಲು ಕಾರಣವೆಂದು ಶಾಸ್ತ್ರಗಳು ಹೇಳುತ್ತವೆ. ಆದ್ರೆ ಕೆಲವೊಮ್ಮೆ ಸರಿಯಾದ ಆರೈಕೆ ಮಾಡಿದರೂ ತುಳಸಿ ಗಿಡ ಒಣಗಲು ಶುರುವಾಗುತ್ತದೆ. ಇದನ್ನು ಸಾಮಾನ್ಯ ಬೆಳವಣಿಗೆ ಎನ್ನುವುದರ ಜೊತೆಗೆ, ವಾಸ್ತು ಹಾಗೂ ಜ್ಯೋತಿಷ್ಯದ ಪ್ರಕಾರವೂ ಹಲವು ಅರ್ಥಗಳನ್ನು ನೀಡಲಾಗಿದೆ.
ತುಳಸಿ ಗಿಡವು ಪದೇ ಪದೇ ಒಣಗುವುದನ್ನು ಅಶುಭದ ಸೂಚನೆ ಎಂದು ಹೇಳಲಾಗುತ್ತದೆ. ಮನೆಯಲ್ಲಿನ ಆರ್ಥಿಕ ಸಮಸ್ಯೆಗಳು, ಆರೋಗ್ಯ ಸಮಸ್ಯೆಗಳು ಅಥವಾ ಅಶಾಂತಿಯ ಸಂಕೇತವೆಂದು ಕೆಲವರು ನಂಬುತ್ತಾರೆ.
ಜ್ಯೋತಿಷ್ಯ ಪ್ರಕಾರ ತುಳಸಿಯನ್ನು ಬುಧ ಗ್ರಹಕ್ಕೆ ಹೋಲಿಕೆ ಮಾಡಲಾಗುತ್ತದೆ. ಜಾತಕದಲ್ಲಿ ಬುಧ ದುರ್ಬಲವಾಗಿದ್ದರೆ ಅದರ ಪರಿಣಾಮವಾಗಿ ತುಳಸಿ ಗಿಡ ಬೆಳೆಯದೇ ಒಣಗುತ್ತದೆ ಎಂದು ಹೇಳಲಾಗಿದೆ. ವಿಶೇಷವಾಗಿ ಟೆರೇಸ್‌ನಲ್ಲಿ ತುಳಸಿ ಇಡುವುದನ್ನು ತಪ್ಪು ಎಂದು ಪರಿಗಣಿಸಲಾಗುತ್ತದೆ.
ಪಿತೃ ದೋಷದ ಲಕ್ಷಣ:
ಮನೆಯ ಸದಸ್ಯರ ನಡುವೆ ನಿರಂತರ ಜಗಳ, ಅಶಾಂತಿ, ಗಲಾಟೆ ನಡೆಯುತ್ತಿರುವ ಸಂದರ್ಭದಲ್ಲಿ ತುಳಸಿ ಗಿಡ ಒಣಗುವುದು ಪಿತೃ ದೋಷದ ಪರಿಣಾಮವಾಗಿರಬಹುದು ಎಂದು ಶಾಸ್ತ್ರಗಳಲ್ಲಿ ಉಲ್ಲೇಖವಿದೆ.
ಧಾರ್ಮಿಕ ನಂಬಿಕೆ:
ಮನೆಯ ಮುಂದೆ ತುಳಸಿ ಗಿಡ ಒಣಗುವುದು ಲಕ್ಷ್ಮಿ ಮನೆಯಿಂದ ಹೊರ ಹೋಗುವ ಸೂಚನೆ ಎಂದು ಹಿರಿಯರು ಹೇಳುತ್ತಾರೆ. ಇದರ ನಂತರ ಬಡತನ, ಅನಾರೋಗ್ಯ, ಸಮಸ್ಯೆಗಳು ಮನೆಮಾಡುತ್ತವೆ ಎನ್ನುವ ನಂಬಿಕೆ ಇದೆ.
ತುಳಸಿ ಗಿಡದ ಒಣಗುವುದನ್ನು ಕೆಲವರು ಅಶುಭದ ಸಂಕೇತವಾಗಿ ನೋಡಿದರೂ, ವೈಜ್ಞಾನಿಕ ದೃಷ್ಟಿಯಿಂದ ನೀರಿನ ಕೊರತೆ, ಅತಿಯಾಗಿ ತೇವ, ಅಥವಾ ಸೂರ್ಯರಶ್ಮಿಯ ಅಭಾವ ಕಾರಣವಾಗಿರಬಹುದು. ಆದ್ದರಿಂದ ಮನೆಯಲ್ಲಿ ಒಣಗಿದ ತುಳಸಿಯನ್ನು ಇಟ್ಟುಕೊಳ್ಳದೆ ಹೊಸ ಗಿಡ ನೆಡುವುದು ಉತ್ತಮ. ಹೀಗೆ ಮಾಡಿದರೆ ಮನೆಗೆ ಮತ್ತೆ ಶುಭ ಹಾಗೂ ಸಕಾರಾತ್ಮಕ ಶಕ್ತಿ ಹರಿದು ಬರುತ್ತದೆ ಎಂಬ ವಿಶ್ವಾಸ ಜನರಲ್ಲಿದೆ.