ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡುವಂತೆ ಆಗ್ರಹಿಸಿ ನಡೆಸುತ್ತಿದ್ದ ಪ್ರತಿಭಟನೆಯು ಹಿಂಸೆಯ ರೂಪ ತಾಳಿದ್ದು, ನಾಲ್ವರು ಸಾವನ್ನಪ್ಪಿದ್ದು, 70 ಮಂದಿ ಗಾಯಗೊಂಡಿದ್ದಾರೆ.
ಘರ್ಷಣೆಯ ಸಂದರ್ಭದಲ್ಲಿ ಬಿಜೆಪಿ ಕಚೇರಿ, ಪೊಲೀಸರ ವಾಹನ ಸೇರಿದಂತೆ ಹಲವಾರು ವಾಹನಗಳ ಮೇಲೆ ದಾಳಿ ಮಾಡಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಬೇಕಾಯಿತು.
ಲೇಹ್ ಅಪೆಕ್ಸ್ ಬಾಡಿ (LAB) ಯ ಯುವ ವಿಭಾಗವು ಕರೆ ನೀಡಿದ್ದ ಪ್ರತಿಭಟನೆ ಹಿಂಸಾತ್ಮಕವಾಗಿ ಮಾರ್ಪಟ್ಟಿದೆ. ಅಧಿಕಾರಿಗಳು ನಗರದಲ್ಲಿ ಕರ್ಫ್ಯೂ ವಿಧಿಸಿದ್ದು, ಐದಕ್ಕೂ ಹೆಚ್ಚು ಜನರು ಸಭೆ ಸೇರುವುದನ್ನು ನಿಷೇಧಿಸಿದ್ದಾರೆ.
ಹಿಂಸಾಚಾರವನ್ನು ನಿಯಂತ್ರಿಸಲು ಪೊಲೀಸರು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಮತ್ತು ಲಾಠಿ ಪ್ರಹಾರ ನಡೆಸಿದರು. ಪ್ರತಿಭಟನೆ ಉಗ್ರ ಸ್ವರೂಪ ಪಡೆದುದರಿಂದ ಲೇಹ್ ಲಡಾಖ್‌ನಲ್ಲಿ ಕೇಂದ್ರ ಆಡಳಿತವು ಭಾರತೀಯ ನಾಗರಿಕ್ ಸುರಕ್ಷಾ ಸಂಹಿತಾ (BNSS), 2023ರ ಸೆಕ್ಷನ್ 163ರ ಅಡಿಯಲ್ಲಿ ಕರ್ಫ್ಯೂ ವಿಧಿಸಿತು. ಇದರಿಂದ ತಕ್ಷಣದಿಂದ ಜಾರಿಯಾಗುವಂತೆ ಪ್ರತಿಭಟನೆ ಮತ್ತು ಸಭೆ ಸೇರುವುದನ್ನು ನಿಷೇಧಿಸಲಾಯಿತು. ಪೂರ್ವ ಲಿಖಿತ ಅನುಮೋದನೆ ಇಲ್ಲದೆ ಯಾವುದೇ ರೀತಿಯ ಮೆರವಣಿಗೆ, ರ‍್ಯಾಲಿ ನಡೆಸಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ.