Thursday, September 25, 2025

ದೇಶದಾದ್ಯಂತ ವೇಗವಾಗಿ ಹರಡುತ್ತಿದೆ H3N2 ಫ್ಲೂ: ನೀವೂ ಹುಷಾರಾಗಿರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ H3N2 ವೈರಸ್ ತೀವ್ರವಾಗಿ ಹರಡುತ್ತಿದ್ದು, ಲಕ್ಷಾಂತರ ಜನರಿಗೆ ಈ ಸೋಂಕು ತಗುಲಿದೆ. ಇನ್ಫ್ಲುಯೆನ್ಸಾ A ಕುಟುಂಬಕ್ಕೆ ಸೇರಿರುವ ಈ H3N2 ತಳಿ ಸಾಮಾನ್ಯ ಜ್ವರಕ್ಕಿಂತ ಹೆಚ್ಚು ತೀವ್ರವಾದ ಲಕ್ಷಣಗಳನ್ನು ತರುತ್ತಿದೆ. ಕರ್ನಾಟಕದಲ್ಲಿಯೂ ವೈರಸ್ ಕಾಣಿಸಿಕೊಂಡಿದ್ದು, ವೈದ್ಯಕೀಯ ವಲಯದಲ್ಲಿ ಆತಂಕ ಹೆಚ್ಚಿಸಿದೆ.

2025ರಲ್ಲಿ ಮಳೆ, ತಾಪಮಾನ ಬದಲಾವಣೆ, ಮಾಲಿನ್ಯ ಮತ್ತು ಕಡಿಮೆಯಾದ ರೋಗನಿರೋಧಕ ಶಕ್ತಿಯಿಂದ H3N2 ವೈರಸ್ ಗಂಭೀರವಾಗಿ ಹರಡುತ್ತಿದೆ. ಈ ಜ್ವರವು ಉಸಿರಾಟದ ವ್ಯವಸ್ಥೆಯನ್ನು ತೀವ್ರವಾಗಿ ಹಾನಿ ಮಾಡುತ್ತದೆ. ಜ್ವರ, ನಿರಂತರ ಕೆಮ್ಮು (ಕೆಲವೊಮ್ಮೆ 2 ವಾರಗಳವರೆಗೆ), ಗಂಟಲು ನೋವು, ಮೂಗು ಕಟ್ಟುವಿಕೆ, ತಲೆನೋವು, ಆಯಾಸ ಹಾಗೂ ಉಸಿರಾಟದ ತೊಂದರೆ ಪ್ರಮುಖ ಲಕ್ಷಣಗಳಾಗಿವೆ. ಕೆಲವರಿಗೆ ವಾಂತಿ ಮತ್ತು ಅತಿಸಾರವೂ ಕಾಣಿಸಬಹುದು.

ವೈದ್ಯರ ಪ್ರಕಾರ, H3N2 ಜ್ವರವು ಸಾಮಾನ್ಯ ಶೀತಕ್ಕಿಂತ ಹೆಚ್ಚು ದೀರ್ಘಕಾಲ ಇರುತ್ತದೆ. ಪ್ಯಾರೆಸಿಟಮಾಲ್‌ನಂತಹ ಔಷಧಿಗಳು ತಕ್ಷಣದ ಪರಿಹಾರ ನೀಡುವುದಿಲ್ಲ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, 65 ವರ್ಷಕ್ಕಿಂತ ಮೇಲ್ಪಟ್ಟವರು, ಮಧುಮೇಹ, ಆಸ್ತಮಾ ಮತ್ತು ಹೃದ್ರೋಗಿಗಳಿಗೆ ಇದು ಹೆಚ್ಚು ಅಪಾಯಕಾರಿ. ಇಂತಹವರಲ್ಲಿ ಬ್ರಾಂಕೈಟಿಸ್ ಮತ್ತು ನ್ಯುಮೋನಿಯಾ ಉಂಟಾಗುವ ಸಾಧ್ಯತೆ ಇದೆ.

ಭಾರತದಾದ್ಯಂತ ಪ್ರಕರಣಗಳ ಏರಿಕೆ:
ICMR ದತ್ತಾಂಶ ಪ್ರಕಾರ, ಸೆಪ್ಟೆಂಬರ್ 2025 ರವರೆಗೆ H3N2 ತಳಿ 50% ಗಂಭೀರ ತೀವ್ರ ಉಸಿರಾಟದ ಸೋಂಕು (SARI) ಪ್ರಕರಣಗಳಿಗೆ ಕಾರಣವಾಗಿದೆ. ದೆಹಲಿ ಆಸ್ಪತ್ರೆಗಳಲ್ಲಿ ಅನೇಕ OPD ರೋಗಿಗಳು ಇದೇ ರೋಗಲಕ್ಷಣಗಳೊಂದಿಗೆ ದಾಖಲಾಗುತ್ತಿದ್ದಾರೆ. ಮುಂಬೈ, ಕರ್ನಾಟಕ, ಕಾನ್ಪುರ ಸೇರಿದಂತೆ ಅನೇಕ ನಗರಗಳಲ್ಲಿ ಸೋಂಕಿನ ಪ್ರಮಾಣ ಏರಿಕೆಯಾಗಿದೆ.

2025-26ರ ಫ್ಲೂ ಲಸಿಕೆ H3N2 ತಳಿಯಿಂದ ರಕ್ಷಣೆ ನೀಡುತ್ತದೆ. ಟ್ರಿವಲೆಂಟ್ ಅಥವಾ ಕ್ವಾಡ್ರಿವಲೆಂಟ್ ರೂಪದಲ್ಲಿ ದೊರೆಯುವ ಈ ಲಸಿಕೆ ಇನ್ಫ್ಲುಯೆನ್ಸಾ A ಮತ್ತು B ತಳಿಗಳನ್ನು ಒಳಗೊಂಡಿದೆ. ಭಾರತದಲ್ಲಿ UIP (ಯುನಿವರ್ಸಲ್ ಇಮ್ಯುನೈಸೇಶನ್ ಪ್ರೋಗ್ರಾಂ)ನಲ್ಲಿ ಇದನ್ನು ಸೇರಿಸಲಾಗಿಲ್ಲವಾದರೂ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿದೆ. 100% ರಕ್ಷಣೆ ನೀಡದಿದ್ದರೂ, ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡಲು ಇದು ಸಹಕಾರಿಯಾಗಿದೆ.

ಮುನ್ನೆಚ್ಚರಿಕೆ ಕ್ರಮಗಳು ಏನು?

  • ಲಸಿಕೆ ಹಾಕಿಸಿಕೊಳ್ಳುವುದು
  • ಆಗಾಗ್ಗೆ ಕೈ ತೊಳೆಯುವುದು
  • ಮಾಸ್ಕ್ ಧರಿಸುವುದು
  • ಸೋಂಕಿತ ವ್ಯಕ್ತಿಗಳ ಸಂಪರ್ಕ ತಪ್ಪಿಸುವುದು
  • ಆರೋಗ್ಯಕರ ಆಹಾರ ಸೇವನೆ
  • ಸಮರ್ಪಕ ವಿಶ್ರಾಂತಿ ಪಡೆಯುವುದು
  • ಆರಂಭಿಕ ಹಂತದಲ್ಲಿ ಒಸೆಲ್ಟಾಮಿವಿರ್ ಮತ್ತು ಜನಾಮಿವಿರ್‌ ನಂತಹ ಆಂಟಿವೈರಲ್ ಔಷಧ ಸೇವನೆ

H3N2 ವೈರಸ್ COVID-19 ನಷ್ಟು ಮಾರಕವಾಗದಿದ್ದರೂ, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಂತ ಮುಖ್ಯ. ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ದೀರ್ಘಕಾಲಿಕ ಕಾಯಿಲೆ ಹೊಂದಿರುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕು. ತಕ್ಷಣ ವೈದ್ಯಕೀಯ ನೆರವಿಗೆ ಧಾವಿಸುವುದರಿಂದ ಸೋಂಕಿನ ತೀವ್ರತೆ ಕಡಿಮೆಯಾಗಲು ಸಹಕಾರಿಯಾಗುತ್ತದೆ.

ಇದನ್ನೂ ಓದಿ