Thursday, September 25, 2025

Women | ಸೀರೆಯ ಇತಿಹಾಸ ಗೊತ್ತಾ? ಅದು ಭಾರತೀಯ ಸಂಸ್ಕೃತಿಯ ಭಾಗವಾಗಿದ್ದು ಹೇಗೆ?

ಸೀರೆ ಧರಿಸೋದು ಅಂದ್ರೆ ಮಹಿಳೆಯರಲ್ಲಿ ಶಿಷ್ಟಾಚಾರ, ಗೌರವ ಮತ್ತು ಸೌಂದರ್ಯದ ಸಂಕೇತ ಅಂದ್ರು ತಪ್ಪಾಗಲ್ಲ . ಹಬ್ಬ-ಹರಿದಿನಗಳು, ಮದುವೆಗಳು, ಧಾರ್ಮಿಕ ವಿಧಿವಿಧಾನಗಳು, ಯಾವುದೇ ವಿಶೇಷ ಸಂದರ್ಭದಲ್ಲೂ ಸೀರೆ ಧರಿಸುವುದು ಭಾರತೀಯ ಸಂಪ್ರದಾಯದ ಅವಿಭಾಜ್ಯ ಅಂಗವಾಗಿದೆ.

ಸೀರೆ ಭಾರತದ ಮಹಿಳೆಯರ ಸಂಪ್ರದಾಯಿಕ ಉಡುಗೆ, ಇದು ಕೇವಲ ವಸ್ತ್ರವಲ್ಲ; ಒಂದು ಸಂಸ್ಕೃತಿಯ ಗುರುತು. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಈ ಉಡುಗೆ, ಇಂದಿಗೂ ಭಾರತೀಯ ಮಹಿಳೆಯರ ಶೈಲಿ ಮತ್ತು ಸೊಬಗು ತೋರಿಸುವ ಪ್ರಮುಖ ಅಂಶವಾಗಿದೆ. ಸೀರೆ ಮೊದಲು ಯಾರು ಧರಿಸಿದ್ದು ಎಂಬುದಕ್ಕೆ ಸ್ಪಷ್ಟ ಉತ್ತರ ಸಿಗದಿದ್ದರೂ, ಪುರಾತನ ಶಿಲಾಶಾಸನಗಳು, ಶಿಲ್ಪಗಳು ಮತ್ತು ಶಾಸ್ತ್ರಗಳಲ್ಲಿ ಸೀರೆ ಕುರಿತು ಉಲ್ಲೇಖಗಳಿವೆ.

ಇತಿಹಾಸಕಾರರ ಪ್ರಕಾರ, ಕ್ರಿಸ್ತ ಪೂರ್ವ 2800ರ ಸುಮಾರಿಗೆ ಸಿಂಧೂ ನಾಗರಿಕತೆಯಲ್ಲಿ ಮಹಿಳೆಯರು ಉದ್ದವಾದ ಬಟ್ಟೆಯನ್ನು ದೇಹದ ಮೇಲೆ ಧರಿಸುತ್ತಿದ್ದರು. ನಂತರ ವೈದಿಕ ಯುಗದಲ್ಲಿ “ಅಂತರೀಯ” ಮತ್ತು “ಉತ್ತರೀಯ” ಎಂಬ ಬಟ್ಟೆಗಳ ಬಳಕೆಯೊಂದಿಗೆ ಸೀರೆ ರೂಪುಗೊಂಡಿತು. ಮಹಾಭಾರತ ಮತ್ತು ರಾಮಾಯಣ ಕಾಲದ ಶಿಲ್ಪಗಳಲ್ಲಿ ಸಹ ಸೀರೆ ಧಾರಣೆ ಮಾಡಿದ ಮಹಿಳೆಯರ ಚಿತ್ರಣ ಕಾಣಿಸುತ್ತದೆ.

ಸೀರೆ – ಸಂಸ್ಕೃತಿಯ ಪ್ರತೀಕ: ಸೀರೆ ಕೇವಲ ಉಡುಗೆ ಅಲ್ಲ, ಅದು ಭಾರತದ ಸಂಸ್ಕೃತಿಯ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ. ಪ್ರತಿ ರಾಜ್ಯದಲ್ಲೂ ಸೀರೆ ಧರಿಸುವ ವಿಧಾನ ವಿಭಿನ್ನವಾಗಿದ್ದು, ಅವು ಸ್ಥಳೀಯ ಸಂಪ್ರದಾಯ ಮತ್ತು ಜೀವನಶೈಲಿಯನ್ನು ತೋರಿಸುತ್ತದೆ. ಉದಾಹರಣೆಗೆ, ಕನ್ನಡನಾಡಿನ ಇಳಕಲ್ ಸೀರೆ, ಮೈಸೂರು ಸಿಲ್ಕ್ ಸೀರೆ, ತಮಿಳುನಾಡಿನ ಕಾಂಚೀಪುರಂ ಸೀರೆ, ಬಂಗಾಳದ ತಾಂತ ಸೀರೆ, ಉತ್ತರ ಭಾರತದ ಬನಾರಸಿ ಸೀರೆ – ಇವು ಎಲ್ಲವೂ ಭಾರತೀಯ ಕಲೆ ಮತ್ತು ಕೌಶಲ್ಯದ ಅಮೂಲ್ಯ ಆಸ್ತಿಗಳಾಗಿವೆ.

ಭಾರತದಲ್ಲಿ ಸೀರೆಯು ಆಳವಾದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವವನ್ನು ಹೊಂದಿದೆ. ಸೊಬಗು ಮತ್ತು ಸಂಪ್ರದಾಯವನ್ನು ಸಂಕೇತಿಸುವ ಸೀರೆ, ದೇಶಾದ್ಯಂತ ಮಹಿಳೆಯರು ಧರಿಸುವ ಈ ಕಾಲಾತೀತ ಉಡುಪು ಕೇವಲ ಉಡುಗೆಯಲ್ಲ, ಬದಲಾಗಿ ಭಾರತೀಯ ಪರಂಪರೆಯ ಪ್ರಾತಿನಿಧ್ಯವಾಗಿದೆ. ಸಂಕೀರ್ಣವಾದ ನೇಯ್ಗೆ ತಂತ್ರಗಳು, ವೈವಿಧ್ಯಮಯ ಸೀರೆ ಮತ್ತು ಪ್ರಾದೇಶಿಕ ವ್ಯತ್ಯಾಸಗಳು ಭಾರತದ ಶ್ರೀಮಂತ ಜವಳಿ ಸಂಪ್ರದಾಯಗಳನ್ನು ಎತ್ತಿ ತೋರಿಸುತ್ತವೆ.

ಇದನ್ನೂ ಓದಿ