ಹೊಸದಿಗಂತ ವರದಿ ಚಿತ್ರದುರ್ಗ:
ಚುನಾವಣೆಯ ಸಮಯದಲ್ಲಿ ಯಾವುದೇ ಆಮಿಷಗಳಿಗೆ ಬಲಿಯಾಗಿ ತಮ್ಮ ಮತಗಳನ್ನು ಮಾರಿಕೊಳ್ಳಬೇಡಿ. ನಿಮ್ಮ ಸಮುದಾಯಕ್ಕೆ ನೆರವು ನೀಡುವ ಯಾವುದೇ ಪಕ್ಷದ ವ್ಯಕ್ತಿಯಾದರೂ ಅವರನ್ನು ಆಯ್ಕೆ ಮಾಡಿ ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ ಎಂದು ಸಮಾಜದ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಕರೆ ನೀಡಿದರು.
ಹಿರಿಯೂರು ತಾಲ್ಲೂಕಿನ ಪಿಲಾಜನಹಳ್ಳಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಈಡಿಗ ಮಹಾಮಂಡಳಿವತಿಯಿಂದ ಏರ್ಪಡಿಸಿದ್ದ ಚಿಂತನ ಮಂಥನ ಶಿಬಿರ, ನೂತನ ಜಿಲ್ಲೆ, ತಾಲ್ಲೂಕು ಅಧ್ಯಕ್ಷರಗಳ ಮತ್ತು ಪದಾಧಿಕಾರಿಗಳ ಘೋಷಣೆ ಹಾಗೂ ನಾರಾಯಣ ಗುರುಗಳ ೧೭೧ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಸಮುದಾಯ ನಮ್ಮ ಕುಲ ಕಸುಬನ್ನು ಹೆಚ್ಚಾಗಿ ಮಾಡುವುದರ ತಲ್ಲಿನವಾಗಿದ್ದರಿಂದ ನಮ್ಮ ಸಮುದಾಯದ ಬೆಳವಣಿಗೆಯ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ. ಇದರಿಂದ ನಾವುಗಳು ಹಿಂದೆ ಉಳಿಯಬೇಕಾಯಿತು ಎಂದರು.
ಭಗವಂತ ಎಲ್ಲರಿಗೂ ಪ್ರತಿಭೆ ನೀಡಿದ್ದಾನೆ. ಆದರೆ ಅದನ್ನು ನಾವು ಶಿಕ್ಷಣದ ಮೂಲಕ ಹೊರ ತೆಗೆಯುವ ಕಾರ್ಯ ಮಾಡಬೇಕು. ಸಂವಿಧಾನ ನಮಗೆ ಹಕ್ಕುಗಳನ್ನು ನೀಡಿದೆ. ಅದರಂತೆ ದೇವರಾಜು ಅರಸುರವರು ತಮ್ಮ ಅಧಿಕಾರದ ಅವಧಿಯಲ್ಲಿ ಮಹತ್ವವಾದ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ನಮ್ಮ ಸಮುದಾಯಕ್ಕೆ ನೆರವಾದರು. ಈಗ ನಾನು ಇಲ್ಲಿ ನಿಂತು ಮಾತನಾಡುವುದಕ್ಕೆ ಅರಸುರವರು ಕಾರಣರಾಗಿದ್ದಾರೆ. ಅರಸುರವರು ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ಚುನಾವಣೆಯಲ್ಲಿ ಮೇಲ್ವರ್ಗದವರು ಮಾತ್ರ ಗೆಲುವು ಸಾಧಿಸುತ್ತಿದ್ದರು. ಅರಸುರವರು ಬಂದ ಮೇಲೆ ನಮ್ಮ ಸಮುದಾಯದವರು ಗೆಲುವು ಸಾಧಿಸಲು ಸಾಧ್ಯವಾಯಿತು ಎಂದು ಹೇಳಿದರು.
ಆಮಿಷಗಳಿಗೆ ಬಲಿಯಾಗಿ ಮತಗಳನ್ನು ಮಾರಿಕೊಳ್ಳಬೇಡಿ : ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್
