October 13, 2026
Tuesday, October 13, 2026
spot_img

ಅರಮನೆಯಂತೆ ಕಂಗೊಳಿಸುತ್ತಿದೆ ‘ಬಿಗ್ ಬಾಸ್ ಹೌಸ್’: ಹೊಸ ಥೀಮ್ ಹೇಗಿದೆ ನೋಡಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಆರಂಭಕ್ಕೆ ಇನ್ನು ಕೆಲವೇ ಗಂಟೆಗಳು ಮಾತ್ರ. ದೊಡ್ಮನೆಗೆ ಬರುವ ಸ್ಪರ್ಧಿಗಳ ಸಂಖ್ಯೆ ಬಗ್ಗೆ ಕುತೂಹಲ ಮೂಡಿದೆ.

ಬಿಗ್‌ಬಾಸ್ ಮನೆಯ ವಿನ್ಯಾಸದ ಫೋಟೋಗಳು ವೈರಲ್ ಆಗಿದ್ದು, ಈ ಬಾರಿ ಸುದೀಪ್ ಹಿಂದೆಯೇ ಹೇಳಿರುವಂತೆ ವಿಶೇಷವಾಗಿ ಕನ್ನಡಕ್ಕೆ ಆದ್ಯತೆ ಕೊಡುವ ರೀತಿಯಲ್ಲೇ ಡಿಸೈನ್ ಆಗಿದೆ. ಈ ಬಾರಿ ದೊಡ್ಮನೆ ಸಂಪೂರ್ಣವಾಗಿ ಕನ್ನಡಮಯವಾಗಿದೆ.

ಮೈಸೂರು ಅರಮನೆ ಥೀಮ್‌ನಲ್ಲಿ ಡಿಸೈನ್ ಆಗಿರುವ ಈ ಸಲ ಬಿಗ್‌ಬಾಸ್ ಮನೆಯಲ್ಲಿ ಕನ್ನಡ ಸಂಸ್ಕೃತಿ, ಭಾಷೆ, ಪರಂಪರೆಯ ಮೇಲೆ ಬೆಳಕು ಚೆಲ್ಲಲಿದೆ. ಮನೆಯ ಹೊರಗಿನ ದೃಶ್ಯ ಅರಮನೆಯಂತೆ ಡಿಸೈನ್ ಆಗಿದ್ದರೆ, ಅಂಬಾರಿ ಹೊತ್ತ ಆನೆ, ವಿಜಯನಗರ ಸಾಮ್ರಾಜ್ಯದ ವೈಭವದ ಸಂಕೇತ ಕಲ್ಲಿನ ರಥ, ಕರಾವಳಿ ಆಚರಣೆ ಕಂಬಳ, ಚೆನ್ನಪಟ್ಟಣದ ಬೊಂಬೆಗಳು, ಭರತನಾಟ್ಯ ಕಲೆ, ಡೊಳ್ಳುಕುಣಿತ ಕಲೆಗಳಿಂದ ಬಿಗ್‌ಬಾಸ್ ಮನೆಯ ಗೋಡೆಗಳು ಆವೃತವಾಗಿದೆ. ಹೀಗಾಗಿ ಎತ್ತ ಕಣ್ಣುಹಾಯಿಸಿದರೂ ಕನ್ನಡ ಸಂಸ್ಕೃತಿಯ ದೃಶ್ಯ ವೈಭವವೇ ಕಾಣುತ್ತೆ. ಆಧುನಿಕ ಆರ್ಕಿಟೆಕ್ಚರ್ ಶೈಲಿ ಜನಪ್ರಿಯವಾಗಿರುವ ಈ ಹೊತ್ತಲ್ಲಿ ಬಿಗ್‌ಬಾಸ್ ಸೆಟ್ ಅನ್ನ ಸಾಂಪ್ರದಾಯಿಕ ಸೊಗಡಲ್ಲಿ ನಿರ್ಮಿಸಿರುವುದು ವಿಭಿನ್ನವಾಗಿ ಗೋಚರಿಸುತ್ತಿದೆ. ಜೊತೆಗೆ ಇಡೀ ಬಿಗ್‌ಬಾಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸೆಟ್ ಅನ್ನ ಸಾಂಪ್ರದಾಯಿಕ ರೀತಿಯಲ್ಲಿ ನಿರ್ಮಿಸಿರುವ ದಾಖಲೆಯೂ ಕ್ರಿಯೇಟ್ ಆಗಿದೆ.

‘ಮೂವರ ಹೆಸರು ರಿವೀಲ್ ಮಿಕ್ಕಿದವರು ಯಾರು’ ಎಂದು ಪ್ರಶ್ನೆ ಮಾಡುವ ಪೋಸ್ಟರ್​ನ ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ಪೋಸ್ಟರ್​ನಲ್ಲಿ ಈಗಾಗಲೇ ರಿವೀಲ್ ಆದ ಮಂಜು ಭಾಷಿಣಿ, ಮಾತಿನ ಮಲ್ಲಿ ಮಲ್ಲಮ್ಮ ಹಾಗೂ ಕಾಕ್ರೋಚ್ ಸುಧಿ ಹೆಸರು ಇದೆ. ಜೊತೆಗೆ ಬಿಗ್ ಬಾಸ್ ಮನೆಗೆ ಮಂಗಳೂರಿನ ರಕ್ಷಿತಾ ಅವರು ಬಂದಿದ್ದಾರೆ. ಅವರು ಮೂಲತಃ ಮಂಗಳೂರಿನವರಾದರೂ ಮುಂಬೈನಲ್ಲಿ ಅವರ ವಾಸ.

ಉಳಿದ ಸ್ಥಾನಗಳಿಗೆ ಬರಬೇಕಿರುವ ಸ್ಪರ್ಧಿಗಳ ಪೋಸ್ಟರ್​ನ ಜಾಗವನ್ನು ಖಾಲಿ ಬಿಡಲಾಗಿದೆ. ಇದನ್ನು ಲೆಕ್ಕ ಹಾಕಿದರೆ ಒಟ್ಟೂ ಸಂಖ್ಯೆ 19 ಆಗುತ್ತದೆ.

Must Read