ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿರಿಯ ನಟ ನಾನಾ ಪಾಟೇಕರ್ ಸಾವಿಗೆ ಹೃದಯದ ಪ್ರಮುಖ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಹೃದಯಾಘಾತ ಉಂಟಾಗಿದೆ ಎಂದು ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿದೆ.
ಗೋವಾದ ಸರ್ಕಾರಿ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ಈ ಮಾಹಿತಿ ದೃಢಪಡಿಸಿದ್ದಾರೆ ಎಂದು ವರದಿಗಳು ಹೇಳಿದೆ.
ಮರಣೋತ್ತರ ಪರೀಕ್ಷೆಯ ಪ್ರಕಾರ, ಹೃದಯಕ್ಕೆ ರಕ್ತ ಪೂರೈಸುವ ಎಡ ಮುಖ್ಯ ಕೊರೊನರಿ ಧಮನಿಯಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಅಪಧಮನಿಗಳಲ್ಲಿ ಕೊಬ್ಬಿನ ಪದಾರ್ಥಗಳು ಸಂಗ್ರಹವಾಗಿ ರಕ್ತನಾಳ ಕಿರಿದಾಗುವ ಅಥವಾ ತಡೆಯುಂಟಾಗುವ ಸಮಸ್ಯೆಯ ಹಿನ್ನೆಲೆಯಲ್ಲಿ ಈ ಸ್ಥಿತಿ ಉಂಟಾಗಿತ್ತು ಎಂದು ವೈದ್ಯಕೀಯ ವರದಿ ತಿಳಿಸಿದೆ. ಇದನ್ನು ಸಹಜ ಸಾವೆಂದು ವರದಿಯಲ್ಲಿ ದಾಖಲಿಸಲಾಗಿದೆ.
ಅಸ್ವಸ್ಥರಾದ ಬಳಿಕ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ
ವರದಿಯ ಪ್ರಕಾರ, 75 ವರ್ಷದ ನಾನಾ ಪಾಟೇಕರ್ ಅವರು ಅಕ್ಟೋಬರ್ 8ರ ಮುಂಜಾನೆ ಗೋವಾದ ಪಣಜಿ ಸಮೀಪದ ಡೋನಾ ಪೌಲಾದಲ್ಲಿರುವ ತಮ್ಮ ನಿವಾಸದಲ್ಲಿ ಅಸ್ವಸ್ಥರಾಗಿದ್ದರು. ಅವರ ಆರೈಕೆದಾರರು ಖಾಸಗಿ ಆಸ್ಪತ್ರೆಗೆ ಕರೆ ಮಾಡಿ ಆಂಬುಲೆನ್ಸ್ ಕಳುಹಿಸುವಂತೆ ಮನವಿ ಮಾಡಿದ್ದರು. ಬಳಿಕ ಆಂಬುಲೆನ್ಸ್ ಅವರ ನಿವಾಸಕ್ಕೆ ತೆರಳಿತ್ತು.
ಆಸ್ಪತ್ರೆಯಲ್ಲಿ ವೈದ್ಯರು ಸುಮಾರು 45 ನಿಮಿಷಗಳ ಕಾಲ ಹೃದಯ-ಶ್ವಾಸಕೋಶ ಪುನಶ್ಚೇತನ ಪ್ರಕ್ರಿಯೆ (ಸಿಪಿಆರ್) ನಡೆಸಿದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬೆಳಗಿನ ಜಾವ 5.10ಕ್ಕೆ ಮೃತಪಟ್ಟಿರುವುದಾಗಿ ಘೋಷಿಸಲಾಯಿತು. ನಂತರ ಅವರ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ
ಮರಣೋತ್ತರ ಪರೀಕ್ಷೆಯ ಬಳಿಕ ಪುತ್ರ ಮಲ್ಹಾರ್ ಗೋವಾಕ್ಕೆ ಆಗಮಿಸಿ ತಂದೆಯ ಪಾರ್ಥಿವ ಶರೀರವನ್ನು ಪುಣೆಗೆ ಕೊಂಡೊಯ್ದು, ಅಲ್ಲಿಂದ ಡೋಂಜೆ ಗ್ರಾಮದ ಕುಟುಂಬದ ತೋಟದ ಮನೆಗೆ ಸಾಗಿಸಲಾಯಿತು. ಅಲ್ಲಿ ಪೂರ್ಣ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.



