ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾಕಪ್ ಮುಕ್ತಾಯಗೊಂಡರೂ ವಿವಾದ ಮಾತ್ರ ನಿಂತಿಲ್ಲ. ಈ ವಿವಾದಗಳ ಬೆನ್ನಲ್ಲೇ ಇದೀಗ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರ ಎಕ್ಸ್ ಖಾತೆಯನ್ನು ಭಾರತದಲ್ಲಿ ಬ್ಯಾನ್ ಮಾಡಲಾಗಿದೆ. ಇದಕ್ಕೆ ಮುಖ್ಯ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರ ಟ್ವೀಟ್ಗೆ ಖಾರವಾಗಿ ಪ್ರತಿಕ್ರಿಯಿಸಿರುವುದು.
ಏಷ್ಯಾಕಪ್ ಗೆದ್ದ ಬೆನ್ನಲೇ ಪ್ರಧಾನಿ ಮೋದಿ, ‘ಮೈದಾನದಲ್ಲೂ ಆಪರೇಷನ್ ಸಿಂದೂರ್. ಫಲಿತಾಂಶ ಒಂದೇ – ಭಾರತ ಗೆದ್ದಿದೆ! ಎಂದು ಎಕ್ಸ್ ಖಾತೆಯಲ್ಲಿ ಟೀಮ್ ಇಂಡಿಯಾವನ್ನು ಅಭಿನಂದಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಮೊಹ್ಸಿನ್ ನಖ್ವಿ, “ಯುದ್ಧವು ನಿಮಗೆ ಹೆಮ್ಮೆಯಾಗಿದ್ದರೆ, ಪಾಕಿಸ್ತಾನದ ಕೈಯಲ್ಲಿ ನೀವು ಅವಮಾನಕರ ಸೋಲುಗಳನ್ನು ಇತಿಹಾಸವನ್ನು ಹೊಂದಿದ್ದೀರಿ. ಯಾವುದೇ ಕ್ರಿಕೆಟ್ ಪಂದ್ಯವು ಆ ಸತ್ಯವನ್ನು ಪುನಃ ಬರೆಯಲು ಸಾಧ್ಯವಿಲ್ಲ. ಯುದ್ಧವನ್ನು ಕ್ರೀಡೆಗೆ ಎಳೆದು ತರುವುದು ಹತಾಶೆಯನ್ನು ಬಹಿರಂಗಪಡಿಸುತ್ತದೆ ಮತ್ತು ಆಟದ ಉತ್ಸಾಹವನ್ನೇ ಅವಮಾನಿಸುತ್ತದೆ’ಎಂದು ನಖ್ವಿ ಟ್ವೀಟ್ ಮಾಡಿದ್ದರು.
ಭಾರತದ ವಿರುದ್ಧದ ಈ ವಿವಾದಾತ್ಮಕ ಟ್ವೀಟ್ ಬೆನ್ನಲ್ಲೇ ಇದೀಗ ಮೊಹ್ಸಿನ್ ನಖ್ವಿ ಅವರ ಎಕ್ಸ್ ಖಾತೆಯನ್ನು ಭಾರತದಲ್ಲಿ ತಡೆಯಿಡಲಾಗಿದೆ.
ಪಾಕಿಸ್ತಾನ್ ಆಟಗಾರ ಹಾರಿಸ್ ರೌಫ್ ಭಾರತದ ವಿರುದ್ಧ ಮೈದಾನದಲ್ಲಿ ತೋರಿಸಿದ ಫೈಟರ್ ಜೆಟ್ ಸೆಲೆಬ್ರೇಷನ್ ಅನ್ನು ಸಮರ್ಥಿಸಿಕೊಂಡಿದ್ದರು. ಇದೇ ಕಾರಣದಿಂದಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಅಧ್ಯಕ್ಷನಿಂದ ಏಷ್ಯಾಕಪ್ ಟ್ರೋಫಿ ಸ್ವೀಕರಿಸಲು ಟೀಮ್ ಇಂಡಿಯಾ ಆಟಗಾರರು ನಿರಾಕರಿಸಿದ್ದರು.