July 21, 2026
Tuesday, July 21, 2026
spot_img

ದಸರಾ ಆನೆ ಬಳಿ ಹೋಗುವ ಮುನ್ನ ಎಚ್ಚರ: ಖಡಕ್ ಸೂಚನೆ ಕೊಟ್ರು ಸಚಿವರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿರುವ ಆನೆಗಳ ಬಳಿ ಯಾರಿಗೂ ಬಿಡದಂತೆ ಸೂಚನೆ ನೀಡಲಾಗಿದೆ. ಆದರೂ ಕೆಲವರು ಫೋಟೋ, ರೀಲ್ಸ್ ಮಾಡಿದ್ದು ಇಂತಹವರಿಗೆ ನಿರ್ದಾಕ್ಷಿಣ್ಯವಾಗಿ ದಂಡ ಸೂಚಿಸಲಾಗಿದೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.

ಮೈಸೂರು ಅರಮನೆಯಲ್ಲಿಂದು ಜಂಬೂಸವಾರಿಯ ಪ್ರಧಾನ ಆಕರ್ಷಣೆಯಾದ ದಸರಾ ಆನೆಗಳ ನಿರ್ವಹಣೆಯ ಜವಾಬ್ದಾರಿ ಹೊತ್ತ ಮಾವುತರು ಮತ್ತು ಕಾವಾಡಿಗಳು ಹಾಗೂ ಅವರ ಕುಟುಂಬ ವರ್ಗದವರಿಗೆ ಭೋಜನ ಬಡಿಸಿದ ಬಳಿಕ ಮಾತನಾಡಿದ ಅವರು, ದಸರಾ ಆನೆಗಳ ಸೊಂಡಿಲು, ದಂತ ಹಿಡಿದುಕೊಂಡು ಫೋಟೋ ರೀಲ್ಸ್ ಮಾಡಿ ಸಾಮಾಜಿಕ ತಾಣಗಳಲ್ಲಿ ಹಾಕುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆನೆಗಳನ್ನು ಪಳಗಿಸಿದ್ದರೂ, ಕೆಲವೊಂದು ಸಂದರ್ಭದಲ್ಲಿ ಪ್ರಾಣಿಗಳ ವರ್ತನೆಯನ್ನು ಊಹಿಸುವುದೂ ಅಸಾಧ್ಯ. ಹೀಗಾಗಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿರುವ ಆನೆಗಳ ಬಳಿ ಯಾರಿಗೂ ಬಿಡದಂತೆ ಸೂಚನೆ ನೀಡಲಾಗಿದೆ.ಆನೆಗಳ ಬಳಿ ಹೋಗದಂತೆ ತಡೆಯಲು ಕಮಾಂಡೋ ಬಳಕೆಗೆ ತಿಳಿಸಲಾಗಿದೆ ಎಂದು ಖಂಡ್ರೆ ಹೇಳಿದ್ದಾರೆ.

ಕಳೆದ 18ರಂದು ಮಹಿಳೆಯೊಬ್ಬರು ಸಿಬ್ಬಂದಿಯ ಕಣ್ತಪ್ಪಿಸಿ ರೀಲ್ಸ್ ಮಾಡಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯನ್ನು ನೀಡಲಾಗಿದೆ. ಇದು ಮೇಲ್ನೋಟಕ್ಕೆ ಕರ್ತವ್ಯಲೋಪವಾಗಿದೆ ಎಂಬುದನ್ನು ಪುಷ್ಟೀಕರಿಸಿದ್ದು, ಅಧಿಕಾರಿ, ಸಿಬ್ಬಂದಿಗೂ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಮೈಸೂರು ದಸರಾ ಜಂಬೂಸವಾರಿಯಲ್ಲಿ 8 ಬಾರಿ ಅಂಬಾರಿ ಹೊತ್ತು ಗಜಗಾಂಭೀರ್ಯದಿಂದ ಹೆಜ್ಜೆಹಾಕುತ್ತಾ ಜನಮನ ಗೆದ್ದಿದ್ದ ಅರ್ಜುನ ಆನೆ ಹಾಸನ ಜಿಲ್ಲೆ ಯಸಳೂರು ಬಳಿ ಆನೆ ಸೆರೆ ಕಾರ್ಯಾಚರಣೆ ವೇಳೆ ಹುತಾತ್ಮನಾಗಿದ್ದು, ಸರ್ಕಾರ ಅರ್ಜುನ ಇದ್ದ ನಾಗರಹೊಳೆಯ ಬಳ್ಳೆ ಮತ್ತು ಯಸಳೂರಿನಲ್ಲಿ ಸ್ಮಾರಕ ನಿರ್ಮಿಸಿದೆ. ಈಗಾಗಲೇ ಬಳ್ಳೆಯ ಸ್ಮಾರಕವನ್ನು ಉದ್ಘಾಟಿಸಲಾಗಿದ್ದು, ಈ ತಿಂಗಳಲ್ಲಿ ಯಸಳೂರಿನಲ್ಲೂ ಅರ್ಜುನ ಆನೆ ಸ್ಮಾರಕ ಉದ್ಘಾಟಿಸುವುದಾಗಿ ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !