ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಗ್ಲೆಂಡ್ ತಂಡದ ಆಲ್ ರೌಂಡರ್ ಕ್ರಿಸ್ ವೋಕ್ಸ್ ತಮ್ಮ 15 ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ಅಧಿಕೃತವಾಗಿ ತೆರೆ ಎಳೆದಿದ್ದಾರೆ. 2011ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಪ್ರವೇಶ ಪಡೆದ ವೋಕ್ಸ್, ಇತ್ತೀಚೆಗೆ ಭಾರತ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಆಡಿದ ಬಳಿಕ ನಿವೃತ್ತಿ ಘೋಷಿಸಿದರು.
ಲಂಡನ್‌ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದರೂ ಒಂದೇ ಕೈಯಲ್ಲಿ ಕಣಕ್ಕಿಳಿದು ಬ್ಯಾಟಿಂಗ್ ಮಾಡಿ ಅಭಿಮಾನಿಗಳ ಮೆಚ್ಚುಗೆ ಗಳಿಸಿದ ವೋಕ್ಸ್, ತಮ್ಮ ನಿವೃತ್ತಿ ನಿರ್ಧಾರವನ್ನು ಸೋಷಿಯಲ್ ಮೀಡಿಯಾದ ಮೂಲಕ ಹಂಚಿಕೊಂಡರು. “ಇಂಗ್ಲೆಂಡ್ ಪರ ಆಡುವುದು ನನ್ನ ಬಾಲ್ಯದ ಕನಸು. ಅದು ನನಸಾಗಿರುವುದು ನನ್ನ ಅದೃಷ್ಟ. ಕಳೆದ 15 ವರ್ಷಗಳಲ್ಲಿ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು” ಎಂದು ಅವರು ಬರೆದುಕೊಂಡಿದ್ದಾರೆ.
ವೋಕ್ಸ್ ಇಂಗ್ಲೆಂಡ್ ಪರ 62 ಟೆಸ್ಟ್ ಪಂದ್ಯಗಳಲ್ಲಿ 99 ಇನಿಂಗ್ಸ್‌ಗಳಲ್ಲಿ ಆಡಿ 2034 ರನ್ ಗಳಿಸಿದ್ದಾರೆ ಮತ್ತು 192 ವಿಕೆಟ್ ಕಬಳಿಸಿದ್ದಾರೆ. ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 122 ಪಂದ್ಯಗಳಲ್ಲಿ 1588 ರನ್ ಗಳಿಸಿ 173 ವಿಕೆಟ್ ಪಡೆದಿದ್ದಾರೆ. ಟಿ20 ಫಾರ್ಮಾಟ್‌ನಲ್ಲಿ 33 ಪಂದ್ಯಗಳಲ್ಲಿ 147 ರನ್ ಹಾಗೂ 31 ವಿಕೆಟ್ ಪಡೆದಿದ್ದಾರೆ.
ಕ್ರಿಸ್ ವೋಕ್ಸ್ ತಮ್ಮ ಆಲ್ ರೌಂಡ್ ಪ್ರದರ್ಶನದ ಮೂಲಕ ಇಂಗ್ಲೆಂಡ್ ತಂಡಕ್ಕೆ ಪ್ರಮುಖ ಕೊಡುಗೆ ನೀಡಿದರು. ಟೆಸ್ಟ್, ಏಕದಿನ ಮತ್ತು ಟಿ20 ಎಲ್ಲ ಫಾರ್ಮಾಟ್‌ಗಳಲ್ಲಿ ಸಮಾನವಾಗಿ ಸಾಧನೆ ಮಾಡಿದ ಅವರು, ಮುಂದಿನ ತಲೆಮಾರುಗಳಿಗೆ ಪ್ರೇರಣೆ ನೀಡುವಂತಹ ಆಟಗಾರರಾಗಿ ನೆನಪಿನಲ್ಲಿರುತ್ತಾರೆ.