ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟಿಸಲ್ಪಟ್ಟಿದ್ದ ಯೆಲ್ಲೋ ಲೈನ್ ಮೆಟ್ರೋ ಮತ್ತೊಮ್ಮೆ ಹೊಸ ಬೆಳವಣಿಗೆ ಕಂಡಿದೆ. ಮೊದಲು ಕೇವಲ 3 ರೈಲುಗಳ ಸಂಚಾರವಿತ್ತು. ನಂತರದಲ್ಲಿ ಇನ್ನೊಂದು ರೈಲು ಸಂಚಾರಕ್ಕೆ ಚಾಲನೆ ನೀಡಲಾಗಿತ್ತು. ಈಗ ಸಂಚರಿಸಲಿರುವ ರೈಲುಗಳ ಸಂಖ್ಯೆಯನ್ನು 5 ಕ್ಕೆ ಏರಿಸಲು BMCRL ನಿರ್ಧಾರ ಮಾಡಿದೆ.
ಆರ್.ವಿ ರಸ್ತೆ ಮತ್ತು ಬೊಮ್ಮಸಂದ್ರದ ನಡುವೆ 3 ರೈಲುಗಳಷ್ಟೇ ಸಂಚರಿಸುತ್ತಿದ್ದವು. 25 ನಿಮಿಷಗಳಿಗೊಂದು ರೈಲಿನ ಸೇವೆಯಿತ್ತು. ಸೆಪ್ಟೆಂಬರ್ 10 ರಂದು ರೈಲಿನ ಸಂಖ್ಯೆಯನ್ನು ನಾಲ್ಕಕ್ಕೇರಿಸಿದ್ದರು. ಅದರೊಂದಿಗೆ 19 ನಿಮಿಷಗಳಿಗೊಮ್ಮೆ ಒಂದು ರೈಲು ಸೇವೆ ಒದಗಿಸುತ್ತಿತ್ತು. ಈ ವ್ಯವಸ್ಥೆಗೀಗ ಇನ್ನೊಂದು ರೈಲು ಸೇರಲಿದೆ.
ಹೊಸದಾಗಿ ಸೇರ್ಪಡೆಗೊಳ್ಳಲಿರುವ ಈ 5 ನೇ ರೈಲಿನಿಂದ ಮೆಟ್ರೋ ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆಯಾದ ಜನದಟ್ಟಣೆ ತಕ್ಕ ಮಟ್ಟಿಗೆ ಕಡಿಮೆಯಾಗಲಿದೆ. ನೂತನ ರೈಲು ಸೇವೆ ಪೂರ್ತಿಯಾಗಿ ಸಂವಹನ ಆಧಾರಿತ ರೈಲು ನಿಯಂತ್ರಣಕ್ಕೆ ಒಳಪಟ್ಟಿದೆ. ಇದರಿಂದಾಗಿ ನಮ್ಮ ಮೆಟ್ರೋದಲ್ಲಿ ಪ್ರಪ್ರಥಮ ಬಾರಿಗೆ ಚಾಲಕ ರಹಿತ ರೈಲು ಸಂಚಾರವಾಗಲಿದೆ.