January21, 2026
Wednesday, January 21, 2026
spot_img

ಕುತೂಹಲ ಮೂಡಿಸಿದ ಡಿಸಿಎಂ ನಡೆ: ಕೋಡಿಮಠ ಶ್ರೀ ಗಳ ಭೇಟಿಯಾದ ಡಿಕೆ ಶಿವಕುಮಾರ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಹಾಸನ ಜಿಲ್ಲೆಯಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೋಡಿಮಠದ ಶ್ರೀಗಳನ್ನು ಭೇಟಿಯಾಗಿದ್ದಾರೆ. ಆ ವೇಳೆ, ಶ್ರೀಗಳು ಏನು ಆಶೀರ್ವಾದ ಮಾಡಿದರು ಎನ್ನುವ ಪ್ರಶ್ನೆಗೆ ಡಿಕೆಶಿ ಮಾರ್ಮಿಕವಾಗಿ ಉತ್ತರಿಸಿದರು

ಮುಖ್ಯಮಂತ್ರಿ ಬದಲಾವಣೆಯ ಕುರಿತು ಇತ್ತೀಚೆಗೆ ಕೋಡಿಮಠದ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಭವಿಷ್ಯವನ್ನು ನುಡಿದಿದ್ದರು. ಹಾಲು ಕೆಟ್ಟರೂ, ಹಾಲುಮತ ಸಮುದಾಯ ಕೆಡುವುದಿಲ್ಲ ಎಂದು ಹೇಳಿದ್ದರು. ಅಂದರೆ, ಸಿದ್ದರಾಮಯ್ಯ ಅವರಾಗಿಯೇ ಸಿಎಂ ಕುರ್ಚಿಯಿಂದ ಇಳಿಯಬೇಕು, ಬಲವಂತವಾಗಿ ಅವರನ್ನು ಇಳಿಸಲು ಸಾಧ್ಯವಿಲ್ಲ ಎಂದಿದ್ದರು. ಈ ಹಿನ್ನಲೆಯಲ್ಲಿ, ಡಿಕೆ ಶಿವಕುಮಾರ್, ಕೋಡಿಶ್ರೀಗಳನ್ನು ಭೇಟಿ ಕುತೂಹಲಕ್ಕೆ ಕಾರಣವಾಗಿದೆ.

ಹಾಸನ ಜಿಲ್ಲೆ ಅರಸೀಕೆರೆಯ ಕೋಡಿ ಮಠಕ್ಕೆ ಶನಿವಾರ (ಜುಲೈ 26) ಭೇಟಿ ನೀಡಿ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಅವರ ಆಶೀರ್ವಾದ ಪಡೆದು, ಶಿವಲಿಂಗ ಅಜ್ಜಯ್ಯ ಗದ್ದುಗೆಗೆ ಪೂಜೆ ಸಲ್ಲಿಸಿದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಆ ವೇಳೆ, ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ನಾವು ಎಲ್ಲರ ಸಂಸ್ಕೃತಿಗೆ ಬೆಲೆ ಕೊಡುತ್ತೇವೆ ಎಂದು ಹೇಳಿದ್ದಾರೆ.

ನನಗೆ ಧರ್ಮ, ದೇವರು, ಸಂಸ್ಕೃತಿಯ ಬಗ್ಗೆ ನಮ್ಮ ಆಚಾರವಿಚಾರಗಳ ಬಗ್ಗೆ ನಂಬಿಕೆ ಜಾಸ್ತಿ. ಯಾವುದೇ ಧರ್ಮದ ಯಾವುದೇ ಪದ್ದತಿಗಳು, ತನ್ನದೇ ಆದಂತಹ ಶಕ್ತಿಯನ್ನು ಹೊಂದಿದೆ. ಕೆಲವರು ನಂಬದೇ ಇರಬಹುದು, ಆದರೆ ಇದನ್ನು ನಂಬುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್, ಕೋಡಿಶ್ರೀಗಳನ್ನು ಭೇಟಿಯಾದ ನಂತರ ಹೇಳಿದ್ದಾರೆ.

ಬಹಳ ವರ್ಷದ ನಂತರ ಇಲ್ಲಿಗೆ ಬಂದಿದ್ದೇನೆ, ಕೋಡಿಶ್ರೀಗಳು ಮಠದಲ್ಲೇ ಇದ್ದಾರೆನ್ನುವ ಮಾಹಿತಿ ಸಿಕ್ಕಿತು. ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದವನ್ನು ಪಡೆದುಕೊಂಡು ಬಂದಿದ್ದೇನೆ. ಎಲ್ಲವೂ ಒಳ್ಳೆದಾಗುತ್ತೆ ಎನ್ನುವ ನಂಬಿಕೆಯಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಇದಕ್ಕೂ ಮುನ್ನ ಅರಸೀಕೆರೆ ಜೇನುಕಲ್ಲು ಸಿದ್ದೇಶ್ವರ ಬೆಟ್ಟದ ಮೆಟ್ಟಿಲುಗಳಿಗೆ ನಂತರ ಜೇನುಕಲ್ಲು ಸಿದ್ದೇಶ್ವರ ದೇಗುಲಕ್ಕೆ ತೆರಳಿ, ಡಿಕೆ ಶಿವಕುಮಾರ್ ಪೂಜೆ ಸಲ್ಲಿಸಿದ್ದರು.

Must Read