ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಲ್ಲಿ ಈ ಬಾರಿ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ, ನಿರಂತರವಾಗಿ ಸುರಿಯುತ್ತಿರುವುದರಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ. ಹವಾಮಾನ ಇಲಾಖೆ ಪ್ರಕಾರ, ಅಕ್ಟೋಬರ್ 11ರವರೆಗೆ ಮಳೆಯ ಅಬ್ಬರ ಮುಂದುವರಿಯುವ ನಿರೀಕ್ಷೆಯಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ವಿಜಯಪುರ, ಯಾದಗಿರಿ, ಬಳ್ಳಾರಿ ಸೇರಿದಂತೆ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇದೇ ವೇಳೆ ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳಲ್ಲಿಯೂ ಮಳೆಯ ಮುನ್ಸೂಚನೆ ನೀಡಲಾಗಿದೆ.
ಮಳೆಯ ನಡುವೆಯೇ ಕೆಲವೆಡೆ ಮೋಡ ಕವಿದ ವಾತಾವರಣ ಮಾತ್ರ ಮುಂದುವರಿಯಲಿದೆ. ಮೈಸೂರು, ಬೆಂಗಳೂರು, ಮಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶಗಳಲ್ಲಿ ವ್ಯತ್ಯಾಸ ಕಂಡುಬಂದಿದೆ. ಕರಾವಳಿ ಭಾಗಗಳಾದ ಹೊನ್ನಾವರ, ಕಾರವಾರ, ಮಂಗಳೂರು ಹಾಗೂ ಶಕ್ತಿನಗರದಲ್ಲೂ ಮಳೆಯೊಂದಿಗೆ ತೇವಾಂಶ ಹೆಚ್ಚಿದೆ.
ಮಹಾರಾಷ್ಟ್ರದ ಕರಾವಳಿಯತ್ತ ಸಾಗುತ್ತಿದ್ದ ಶಕ್ತಿ ಚಂಡಮಾರುತವು ದುರ್ಬಲಗೊಂಡಿದ್ದು, ಮುಂಬೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಕ್ಟೋಬರ್ 8ರವರೆಗೆ ತುಂತುರು ಮಳೆ ಹಾಗೂ ಚದುರಿದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.