ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಚುನಾವಣಾ ಆಯೋಗವು ಇಂದು ಸಂಜೆ 4 ಗಂಟೆಗೆ ಬಿಹಾರ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಪ್ರಕಟಿಸಲು ನಿರ್ಧರಿಸಿದೆ. ಚುನಾವಣಾ ಆಯೋಗವು ಬಿಹಾರದಲ್ಲಿ ಎರಡು ದಿನಗಳ ಪರಿಶೀಲನೆ ನಡೆಸಿ, ಚುನಾವಣೆ ಮುಕ್ತ, ನ್ಯಾಯಸಮ್ಮತ ಮತ್ತು ಸುಗಮವಾಗಿರಲು ರಾಜ್ಯದ ರಾಜಕೀಯ ಪಕ್ಷಗಳು ಮತ್ತು ಜಾರಿ ಸಂಸ್ಥೆಗಳೊಂದಿಗೆ ಸಭೆ ನಡೆಸಿದ ಬಳಿಕ ದಿನಾಂಕ ಪ್ರಕಟಣೆಗೆ ಮುಂದಾಗಿದೆ.
ಬಿಹಾರ 243 ಸದಸ್ಯರ ವಿಧಾನಸಭೆಯನ್ನು ಹೊಂದಿದ್ದು, ಇದರ ಅವಧಿ ನವೆಂಬರ್ 22ರಂದು ಕೊನೆಗೊಳ್ಳಲಿದೆ. ಮುಂದಿನ ಚುನಾವಣೆ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಮತ್ತು ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ ನಡುವಿನ ನೇರ ಸ್ಪರ್ಧೆಯಾಗುವ ನಿರೀಕ್ಷೆಯಿದೆ.
2020 ರ ವಿಧಾನಸಭಾ ಚುನಾವಣೆಯಲ್ಲಿ ಮೂರು ಹಂತಗಳಲ್ಲಿ ಮತದಾನ ನಡೆಯಿತು. ಅವಧಿ ಮುಗಿದ ನಂತರ, ಎನ್‌ಡಿಎ ರಾಜ್ಯದಲ್ಲಿ ಸರ್ಕಾರ ರಚಿಸಿತು, ನಿತೀಶ್ ಕುಮಾರ್ ಮುಖ್ಯಮಂತ್ರಿಯಾದರು. ಆಗಸ್ಟ್ 2022 ರಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿ(ಯು) ಮಹಾಘಟಬಂಧನ್‌ನೊಂದಿಗೆ ಸೇರಿಕೊಂಡರೂ, ಜನವರಿ 2024 ರಲ್ಲಿ ಮತ್ತೆ ಎನ್‌ಡಿಎ ಜೊತೆ ಅಧಿಕಾರವನ್ನು ಪುನಃ ರಚಿಸಿತು.
ಚುನಾವಣಾ ಆಯೋಗವು ಎಎಪಿ, ಬಿಎಸ್‌ಪಿ, ಬಿಜೆಪಿ, ಸಿಪಿಐ(ಎಂ), ಕಾಂಗ್ರೆಸ್, ಜೆಡಿ(ಯು), ಎಲ್‌ಜೆಪಿ, ಆರ್‌ಜೆಡಿ ಸೇರಿದಂತೆ ರಾಷ್ಟ್ರೀಯ ಮತ್ತು ರಾಜ್ಯ ಪಕ್ಷಗಳ ಪ್ರತಿನಿಧಿಗಳನ್ನು ಭೇಟಿಯಾಗಿ ಗರಿಷ್ಠ ಮತದಾರರ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಸಲಹೆಗಳನ್ನು ಸಂಗ್ರಹಿಸಿದೆ. ಆಯೋಗವು 22 ವರ್ಷಗಳ ಬಳಿಕ ಮತದಾರರ ಪಟ್ಟಿಯನ್ನು ಪರಿಷ್ಕರಿಸಿದ್ದು, 38 ಕ್ಷೇತ್ರಗಳನ್ನು ಪರಿಶಿಷ್ಟ ಜಾತಿ ಹಾಗೂ 2 ಕ್ಷೇತ್ರಗಳನ್ನು ಪರಿಶಿಷ್ಟ ಪಂಗಡಗಳಿಗೆ ಮೀಸಲಾಗಿವೆ.