ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಸಂಭಾಲ್ನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮಸೀದಿಯನ್ನು ಮುಸ್ಲಿಮರೇ ನೆಲಸಮ ಮಾಡಿರುವ ಘಟನೆ ವರದಿಯಾಗಿದೆ.
ಸಂಭಾಲ್‌ನಲ್ಲಿರುವ ಕೊಳದ ಮೇಲೆ ನಿರ್ಮಿಸಲಾದ ಅಕ್ರಮ ಮಸೀದಿಯನ್ನು ಮುಸ್ಲಿಂ ಸಮುದಾಯ ಮತ್ತು ಮಸೀದಿ ಸಮಿತಿಯು ಬುಲ್ಡೋಜರ್‌ಗಳನ್ನು ಕರೆಸಿ ಕೆಡವಲು ಪ್ರಾರಂಭಿಸಿತು. ಆಡಳಿತ ಮಂಡಳಿ ನೀಡಿದ ನೋಟಿಸ್ ಮತ್ತು ಅಂತಿಮ ಸೂಚನೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಮೂಲಗಳ ಪ್ರಕಾರ, ಮಸೀದಿಯ ಮೇಲಿನ ಭಾಗವನ್ನು ಈಗಾಗಲೇ ಉಳಿ ಮತ್ತು ಸುತ್ತಿಗೆಯಿಂದ ಕೆಡವಲಾಗುತ್ತಿತ್ತು, ಮತ್ತು ಈಗ ಉಳಿದ ಭಾಗವನ್ನು ಬುಲ್ಡೋಜರ್‌ನೊಂದಿಗೆ ತೆರವುಗೊಳಿಸಲಾಗುತ್ತಿದೆ.
ಇನ್ನು ಈ ಮಸೀದಿಯ ತೆರವಿಗೆ ತಡೆ ನೀಡಬೇಕು ಎಂದು ಮಸೀದಿ ಆಡಳಿತ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. ಆದರೆ ಈ ಅರ್ಜಿ ವಜಾಗೊಳಿಸಿದ್ದ ಕೋರ್ಟ್ ತಡೆಗೆ ಆದೇಶ ನೀಡುವುದಿಲ್ಲ ಎಂದು ಹೇಳಿತ್ತು. ಇದರ ಬೆನ್ನಲ್ಲೇ ಸಂಭಾಲ್ ಜಿಲ್ಲಾಡಳಿತ ಮಸೀದಿಯನ್ನು ಕೆಡವಲು ಆಡಳಿತವು ಬುಲ್ಡೋಜರ್‌ನೊಂದಿಗೆ ಬಂದಿತ್ತು, ಆದರೆ ಸ್ಥಳೀಯ ಜನರ ಮನವಿಯ ಮೇರೆಗೆ, ಜಿಲ್ಲಾ ಮ್ಯಾಜಿಸ್ಟ್ರೇಟ್ ಮಸೀದಿ ಸಮಿತಿಗೆ ಅಕ್ರಮ ನಿರ್ಮಾಣವನ್ನು ಸ್ವತಃ ತೆಗೆದುಹಾಕಲು ನಾಲ್ಕು ದಿನಗಳ ಕಾಲಾವಕಾಶ ನೀಡಿದ್ದರು.
ಇದೀಗ ಅಸ್ಮೋಲಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಯಾ ಬುಜುರ್ಗ್ ಗ್ರಾಮದ ಮುಸ್ಲಿಮರು ಭಾನುವಾರ ತಾವೇ ಖುದ್ದು ಗೌಸುಲ್‌ಬರಾ ಮಸೀದಿಗೆ ಬುಲ್ಡೋಜರ್ ತೆಗೆದುಕೊಂಡು ಬಂದು ಮಸೀದಿ ತೆರವು ಮಾಡುತ್ತಿದ್ದಾರೆ.