Saturday, October 11, 2025

FOOD | ಬಿಸಿಬಿಸಿಯಾದ ಮೂಂಗ್‌ದಾಲ್ ನಗ್ಗೆಟ್ಸ್! ಸಂಜೆ ಟೀ ಜೊತೆ ಪರ್ಫೆಕ್ಟ್ ಆಗಿರುತ್ತೆ

ನಮ್ಮ ಆಹಾರದಲ್ಲಿ ಪ್ರೋಟೀನ್ ಮತ್ತು ಫೈಬರ್ ಹೆಚ್ಚಿರುವ ಪದಾರ್ಥಗಳನ್ನು ಸೇರಿಸುವುದು ಬಹಳ ಮುಖ್ಯ. ಹೆಸರುಬೇಳೆ, ವಿಶೇಷವಾಗಿ ಹಳದಿ ಮತ್ತು ಹಸಿರು ಮೂಂಗ್ ದಾಲ್, ಫೈಬರ್ ಮತ್ತು ಪೌಷ್ಟಿಕಾಂಶದ ಭರಪೂರ ಮೂಲವಾಗಿದೆ. ಇದನ್ನು ನಗ್ಗೆಟ್ಸ್ ರೂಪದಲ್ಲಿ ತಯಾರಿಸಿದರೆ ಬಿಸಿಬಿಸಿಯಾಗಿ ಸವಿಯಬಹುದು.

ಬೇಕಾಗುವ ಸಾಮಗ್ರಿಗಳು:

ಹಳದಿ ಮೂಂಗ್ ದಾಲ್ – 1/2 ಕಪ್
ಹಸಿರು ಮೂಂಗ್ ದಾಲ್ – 1/2 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಹೆಚ್ಚಿದ ಈರುಳ್ಳಿ – ಅರ್ಧ
ಹೆಚ್ಚಿದ ಹಸಿರು ಮೆಣಸಿನಕಾಯಿ – 2
ಹೆಚ್ಚಿದ ಕ್ಯಾರೆಟ್ – ಕಾಲು ಕಪ್
ಕರಿಬೇವು – 6–7 ಎಲೆ
ಬ್ರೆಡ್ ತುಂಡುಗಳು – 1 ಕಪ್
ಅಚ್ಚಖಾರದ ಪುಡಿ – 1 ಚಮಚ
ಪೆಪ್ಪರ್ ಪೌಡರ್ – ಕಾಲು ಚಮಚ
ಚಾಟ್ ಮಸಾಲ – ಅರ್ಧ ಚಮಚ
ಜೀರಿಗೆ – ಅರ್ಧ ಚಮಚ
ಜೋಳದ ಹಿಟ್ಟು – 2 ಚಮಚ
ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು

ತಯಾರಿಸುವ ವಿಧಾನ:

ಮೊದಲಿಗೆ ಹಳದಿ ಮತ್ತು ಹಸಿರು ಹೆಸರುಬೇಳೆಗಳನ್ನು ಚೆನ್ನಾಗಿ ತೊಳೆದು 2–3 ಗಂಟೆಗಳ ಕಾಲ ನೆನೆಸಿಡಿ. ನೆನೆಸಿದ ಬೇಳೆಗಳನ್ನು ಅರ್ಧಷ್ಟು ನೀರಿನಲ್ಲಿ ಬೇಯಿಸಿ, ನಂತರ ತಣ್ಣಗಾಗಲು ಬಿಡಿ. 2 ಚಮಚ ಬೇಳೆಯನ್ನು ತೆಗೆದು ಬದಿಗಿಟ್ಟುಕೊಳ್ಳಿ, ಉಳಿದ ಬೇಳೆಗಳನ್ನು ಮಿಕ್ಸರ್‌ನಲ್ಲಿ ಹಾಕಿ ರುಬ್ಬಿಕೊಳ್ಳಿ.

ದೊಡ್ಡ ಬೌಲಿನಲ್ಲಿ ರುಬ್ಬಿದ ಮಿಶ್ರಣವನ್ನು ಹಾಕಿ, ಅದಕ್ಕೆ ತರಕಾರಿಗಳು, ಬೇಳೆ, ಉಪ್ಪು, ಮಸಾಲೆ, ಬ್ರೆಡ್ ತುಂಡುಗಳನ್ನು ಸೇರಿಸಿ. ಕೊನೆಗೆ ಜೋಳದ ಹಿಟ್ಟನ್ನು ಸೇರಿಸಿ ಚೆನ್ನಾಗಿ ಕಲಸಿ ಹಿಟ್ಟನ್ನು ತಯಾರಿಸಿಕೊಳ್ಳಿ.

ಈ ಮಿಶ್ರಣವನ್ನು ಸ್ವಲ್ಪ ಸ್ವಲ್ಪ ತೆಗೆದು ನಿಮ್ಮ ಇಚ್ಛೆಯ ಆಕಾರದಲ್ಲಿ ತಯಾರಿಸಿಕೊಂಡು ಏರ್‌ಫ್ರೈಯರ್ ಅನ್ನು 180°C ಗೆ ಬಿಸಿಗಿಟ್ಟ ಮೇಲೆ Nuggets ಮೇಲೆ ಸ್ವಲ್ಪ ಎಣ್ಣೆ ಸವರಿಸಿ 15 ನಿಮಿಷ ಬೇಯಿಸಿ. ಬೇಕಿದ್ದರೆ ಎಣ್ಣೆಯಲ್ಲಿ ಫ್ರೈ ಮಾಡಿಕೊಳ್ಳಬಹುದು.

error: Content is protected !!