April 11, 2026
Saturday, April 11, 2026
spot_img

ಗ್ಯಾಸ್ ಸಿಲಿಂಡರ್ ಕೊರತೆ ಕೇವಲ ವದಂತಿ: ಬುಕಿಂಗ್ ಮಾಡಲು ಧಾವಂತ ಬೇಡ!

ಹೊಸದಿಗಂತ ಕಾರವಾರ:

ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಲ್‌ಪಿಜಿ (LPG) ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂಬ ಆತಂಕ ಸಾರ್ವಜನಿಕರಲ್ಲಿ ಮನೆಮಾಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಸ್ಪಷ್ಟನೆ ನೀಡಿದ್ದು, ರಾಜ್ಯದಲ್ಲಿ ಗೃಹ ಬಳಕೆಯ ಸಿಲಿಂಡರ್‌ಗಳ ಕೊರತೆ ಇಲ್ಲ ಎಂದು ತಿಳಿಸಿದೆ.

ರಾಜ್ಯ ಸರ್ಕಾರವು ಪ್ರಮುಖ ತೈಲ ಕಂಪನಿಗಳಾದ IOC, BPC ಮತ್ತು HPC ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದೆ. ಪ್ರಸ್ತುತ ದೇಶದಲ್ಲಿ ಗ್ರಾಹಕರಿಗೆ ಬೇಕಾಗುವಷ್ಟು ಪರ್ಯಾಪ್ತ ದಾಸ್ತಾನು ಲಭ್ಯವಿದೆ ಎಂದು ಕಂಪನಿಗಳು ಖಚಿತಪಡಿಸಿವೆ. ಆದ್ದರಿಂದ ಸಾರ್ವಜನಿಕರು ಯಾವುದೇ ಊಹಾತ್ಮಕ ವರದಿಗಳನ್ನು ನಂಬಿ ಆತಂಕಕ್ಕೊಳಗಾಗಬಾರದು ಎಂದು ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾರುಕಟ್ಟೆಯಲ್ಲಿ ಕೃತಕ ಬೇಡಿಕೆ ಸೃಷ್ಟಿಯಾಗದಂತೆ ತಡೆಯಲು ಗ್ರಾಹಕರು ಸಹಕರಿಸಬೇಕು. ಆತಂಕದಲ್ಲಿ ತುರ್ತು ಅಥವಾ ಅನಗತ್ಯ ಬುಕಿಂಗ್ ಮಾಡದೆ, ಸಮರ್ಪಕವಾಗಿ ಬಳಕೆಯ ಸಮತೋಲನ ಕಾಪಾಡಿಕೊಳ್ಳಲು ಸರ್ಕಾರ ಮನವಿ ಮಾಡಿದೆ.

ಸರ್ಕಾರಿ ಆಸ್ಪತ್ರೆಗಳು, ಅಂಗನವಾಡಿಗಳು, ವಿದ್ಯಾರ್ಥಿನಿಲಯಗಳು, ಶಾಲೆ-ಕಾಲೇಜು ಮತ್ತು ಕಾರಾಗೃಹಗಳಂತಹ ಸಾರ್ವಜನಿಕ ಸಂಸ್ಥೆಗಳಿಗೆ ಎಲ್‌ಪಿಜಿ ಪೂರೈಕೆಯಲ್ಲಿ ಯಾವುದೇ ಅಡಚಣೆಯಾಗದಂತೆ ನಿರಂತರ ಸರಬರಾಜು ಮಾಡಲು ತೈಲ ಕಂಪನಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಅಕ್ರಮ ದಾಸ್ತಾನು ಅಥವಾ ಸಿಲಿಂಡರ್‌ಗಳ ಅಕ್ರಮ ಸಾಗಾಟ ಕಂಡುಬಂದಲ್ಲಿ ‘ಅಗತ್ಯ ವಸ್ತುಗಳ ಕಾಯ್ದೆ 1955’ ಹಾಗೂ ಸಂಬಂಧಿತ ಎಲ್‌ಪಿಜಿ ನಿಯಂತ್ರಣಾ ಕಾಯ್ದೆಗಳ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ನಿಗಾ ವಹಿಸಲು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದ್ದು, ಕಾಳಸಂತೆಕೋರರ ವಿರುದ್ಧ ಕಾನೂನು ಸಮರ ಸಾರಲು ಸರ್ಕಾರ ಸಜ್ಜಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !