Sunday, October 12, 2025

ಮನೆಯಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಹಿರಿಯ ಐಪಿಎಸ್ ಅಧಿಕಾರಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಹರಿಯಾಣ ಕೇಡರ್‌ನ ಹಿರಿಯ ಐಪಿಎಸ್ ಅಧಿಕಾರಿಯಾದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ವೈ. ಪೂರಣ್ ಕುಮಾರ್ ಅವರು ಇಂದು (ಅಕ್ಟೋಬರ್ 7) ಚಂಡೀಗಢದ ತಮ್ಮ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಚಂಡೀಗಢದ ಸೆಕ್ಟರ್ 11ರಲ್ಲಿ ಈ ಘಟನೆ ನಡೆದಿದೆ. ಅವರು ತಮ್ಮ ಸೇವಾ ರಿವಾಲ್ವರ್ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸದ್ಯ ವಿಧಿ ವಿಜ್ಞಾನ ತಂಡದ ಸದಸ್ಯರು, ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ತನಿಖೆ ಕೈಗೆತ್ತಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಚಂಡೀಗಢದ ಎಸ್‌ಎಸ್‌ಪಿ ಕನ್ವರ್‌ದೀಪ್‌ ಕೌರ್‌ ಘಟನೆ ಬಗ್ಗೆ ಮಾಹಿತಿ ನೀಡಿ, ‘ಸೆಕ್ಟರ್‌ 11ರ ಪೊಲೀಸ್‌ ಠಾಣೆಗೆ ಮಂಗಳವಾರ ಮಧ್ಯಾಹ್ನ1.30ರ ವೇಳೆಗೆ ಕರೆಬಂದಿದ್ದು, ಪೂರನ್‌ ಕುಮಾರ್‌ ಆತ್ಮಹತ್ಯೆಯ ಬಗ್ಗೆ ಮಾಹಿತಿ ನೀಡಲಾಗಿತ್ತು’ ಎಂದಿದ್ದಾರೆ.

ಐಪಿಎಸ್‌ ಅಧಿಕಾರಿ ವೈ. ಪೂರನ್‌ ಕುಮಾರ್‌ ಮೃತದೇಹ ಅವರ ನಿವಾಸದಲ್ಲಿ ಪತ್ತೆಯಾಗಿದೆ. ಸಿಎಫ್‌ಎಸ್‌ಎಲ್‌ ತಂಡ ಸ್ಥಳಕ್ಕೆ ಧಾವಿಸಿದ್ದು, ತನಿಖೆ ಕೈಗೆತ್ತಿಕೊಳ್ಳಲಾಗಿದೆ. ಪೋಸ್ಟ್‌ ಮಾರ್ಟಮ್‌ ಬಳಿಕವಷ್ಟೇ ಹೆಚ್ಚಿನ ಮಾಹಿತಿ ಹೊರ ಬೀಳಲಿದೆʼʼ ಎಂದು ಕನ್ವರ್‌ದೀಪ್‌ ಕೌರ್‌ ವಿವರಿಸಿದ್ದಾರೆ.

ಪ್ರಸ್ತುತ ಪೂರನ್‌ ಕುಮಾರ್ ಅವರ ಪತ್ನಿ, ಹಿರಿಯ ಐಎಎಸ್ ಅಧಿಕಾರಿ ಅಮ್ನೀತ್ ಪಿ., ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ನೇತೃತ್ವದ ನಿಯೋಗದ ಜತೆ ಜಪಾನ್‌ನಲ್ಲಿದ್ದು, ನಾಳೆ (ಅಕ್ಟೋಬರ್‌ 8) ಭಾರತಕ್ಕೆ ಹಿಂದಿರುಗಲಿದ್ದಾರೆ.

2001 ಬ್ಯಾಚ್‌ನ ಐಪಿಎಸ್ ಅಧಿಕಾರಿ ಪೂರನ್‌ ಕುಮಾರ್‌ ಅವರನ್ನು ಈ ಹಿಂದೆ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರಾಗಿ (ಎಡಿಜಿಪಿ, ರೋಕ್ಟಕ್ ಶ್ರೇಣಿ) ನೇಮಿಸಲಾಗಿತ್ತು. ಇದಾದ ಬಳಿಕ ರೋಕ್ಟಕ್‌ನ ಸುನಾರಿಯಾದಲ್ಲಿರುವ ಪೊಲೀಸ್ ತರಬೇತಿ ಕೇಂದ್ರದ ಇನ್ಸ್‌ಪೆಕ್ಟರ್ ಜನರಲ್ ಆಗಿ ವರ್ಗಾಯಿಸಲಾಯಿತು.

error: Content is protected !!