ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪುತ್ತೂರಿನ ಮುರ ಬಳಿ ಮೇ 27ರಂದು ನಡೆದ ಭೀಕರ ಬಸ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 32 ವರ್ಷದ ಅಪೂರ್ವ ಕೆ. ಭಟ್ ಅವರು, 134 ದಿನಗಳ ಹೋರಾಟದ ಬಳಿಕ ಮಂಗಳವಾರ ಸಂಜೆ 6 ಗಂಟೆಗೆ ಕೊನೆಯುಸಿರೆಳೆದರು.
ಮೇ 27ರಂದು ರಾತ್ರಿ ಪುತ್ತೂರು ಪೇಟೆಯಿಂದ ಮನೆಗೆ ತೆರಳುತ್ತಿದ್ದ ಅಪೂರ್ವ ಕುಟುಂಬದ ಕಾರಿಗೆ, ಮಂಗಳೂರಿನತ್ತ ವೇಗವಾಗಿ ಚಲಿಸುತ್ತಿದ್ದ ಮರ್ಸಿ ಹೆಸರಿನ ಬಸ್ ಡಿಕ್ಕಿ ಹೊಡೆದಿತ್ತು. ಭೀಕರ ಅಪಘಾತದಲ್ಲಿ ಕಾರು ನುಜ್ಜುಗುಜ್ಜಾಗಿತ್ತು. ಬೆಂಗಳೂರು ಮೂಲದ ಆಶಿಶ್-ಅಪೂರ್ವ ದಂಪತಿ ಮಂಗಳೂರಿನವರಾಗಿದ್ದು, ಅವರಿಗೆ ಓರ್ವ ಪುತ್ರಿ ಇದ್ದಾಳೆ. ಬಸ್ ಅಪಘಾತದಿಂದ ಕುಟುಂಬವೇ ತತ್ತರಿಸಿ ಹೋಗಿದ್ದು, ತಂದೆ ಈಶ್ವರ್ ಭಟ್ ಹಾಗೂ ಮಗಳು ಅಪಾಯದಿಂದ ಪಾರಾದರೂ, ಅಪೂರ್ವ ಇಂದು ವಿಧಿವಶರಾಗಿದ್ದಾರೆ.