ಇತ್ತೀಚಿನ ದಿನಗಳಲ್ಲಿ ಶೀಘ್ರದಲ್ಲೇ ತಯಾರಿಸಬಹುದಾದ ಫಾಸ್ಟ್ ಫುಡ್‌ಗಳು ಜನಪ್ರಿಯವಾಗುತ್ತಿವೆ. ಆದರೆ ಹಳ್ಳಿ ರುಚಿಯ ಆರೋಗ್ಯಕರ ಆಹಾರ ಮತ್ತು ಸೊಪ್ಪು-ತರಕಾರಿಗಳ ಉಪಯೋಗ ಕಡಿಮೆಯಾಗುತ್ತಿದೆ. ಹಳ್ಳಿ ಸೊಗಡಿನ ನುಗ್ಗೆ ಸೊಪ್ಪಿನ ಪಲ್ಯ ಆರೋಗ್ಯಕರವಾಗಿರುವುದರ ಜೊತೆಗೆ ಸುಲಭವಾಗಿ ತಯಾರಿಸಬಹುದಾದ ಪದಾರ್ಥವಾಗಿದೆ. ವಾರಕ್ಕೆ ಕನಿಷ್ಠ ಒಂದು ಬಾರಿ ಈ ಪಲ್ಯವನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮ.
ಬೇಕಾಗುವ ಸಾಮಾಗ್ರಿಗಳು:
ನುಗ್ಗೆ ಸೊಪ್ಪು – 2 ಬೌಲ್ (ದೊಡ್ಡದು)
ತೊಗರಿ ಬೇಳೆ – ಅರ್ಧ ಬೌಲ್
ಈರುಳ್ಳಿ – 2
ತೆಂಗಿನ ತುರಿ – 3/4 ಕಪ್
ಬೆಳ್ಳುಳ್ಳಿ – 3–4 ಕಾಪ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 3–4 ಚಮಚ
ಸಾಸಿವೆ – ಅರ್ಧ ಚಮಚ
ಒಣ ಮೆಣಸಿನ ಕಾಯಿ – 2
ತಯಾರಿಸುವ ವಿಧಾನ:
ನುಗ್ಗೆ ಸೊಪ್ಪನ್ನು ಬಿಡಿಸಿ ಎಲೆಗಳನ್ನು ಬೇರ್ಪಡಿಸಿ, ಚನ್ನಾಗಿ ತೊಳೆದುಕೊಂಡು, ನುಗ್ಗೆ ಸೊಪ್ಪಿನ ಅರ್ಧದಷ್ಟು ತೊಗರಿಬೇಳೆ ಮತ್ತು 3 ಲೋಟ ನೀರು ಹಾಕಿ ಬೇಯಿಸಿ. ಬೇಳೆ ಕುದಿಯುತ್ತಿರುವಾಗಲೇ ಬೆಳ್ಳುಳ್ಳಿಯನ್ನು ಸೇರಿಸಿ.
ಬೇಳೆ ಸಂಪೂರ್ಣವಾಗಿ ಬೆಂದ ಮೇಲೆ ನುಗ್ಗೆ ಸೊಪ್ಪು ಹಾಕಿ, 10 ನಿಮಿಷ ಬೇಯಿಸಿರಿ. (ನೀರು ಕಡಿಮೆಯಾಗಿದ್ರೆ ಬಿಸಿ ನೀರು ಸೇರಿಸಬಹುದು) ಸೊಪ್ಪು ಮತ್ತು ನೀರನ್ನು ಬೇರೆ ಬೇರೆ ಸೋಸಿಕೊಳ್ಳಿ.
ಈಗ ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾಗಿಸಿದ ನಂತರ ಸಾಸಿವೆ, ಒಣ ಮೆಣಸಿನ ಕಾಯಿ ಮತ್ತು ಸಣ್ಣಗೆ ಕತ್ತರಿಸಿದ ಈರುಳ್ಳಿಯನ್ನು ಫ್ರೈ ಮಾಡಿ. ಈರುಳ್ಳಿ ಫ್ರೈ ಆದ ಮೇಲೆ, ತೆಂಗಿನ ತುರಿ ಮತ್ತು ಸೋಸಿಕೊಂಡ ನುಗ್ಗೆ ಸೊಪ್ಪನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿದರೆ ಆರೋಗ್ಯಕರವಾದ ನುಗ್ಗೆ ಸೊಪ್ಪಿನ ಪಲ್ಯ ಸಿದ್ಧವಾಗುತ್ತದೆ.